ವಿಶ್ವ ಕಂಡ ಶ್ರೇಷ್ಟ ನಾಯಕ ಡಾ.ಬಿ.ಆರ್.ಅಂಬೇಡ್ಕರ್-ಸಚಿವ ಪ್ರಿಯಾಂಕ ಖರ್ಗೆ

ಬೆಂಗಳೂರು ಗ್ರಾ. ಜಿಲ್ಲೆ, ಜೂ.29-ಭಾರತದಲ್ಲಿ ಪ್ರತಿಯೊಬ್ಬ ನಾಗರೀಕನು ಸ್ವಾಭಿಮಾನದಿಂದ ಬದುಕಲು ಅನುಕೂಲ ಮಾಡಿಕೊಟ್ಟಿರುವ ಸಮಾನತೆಯ ಹರಿಕಾರ ವಿಶ್ವ ಕಂಡ ಶ್ರೇಷ್ಠ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಪ್ರಿಯಾಂಕ ಖರ್ಗೆ ಅವರು ಹೇಳಿದರು.

ಬಾಶೆಟ್ಟಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕು, ಬಾಶೆಟ್ಟಹಳ್ಳಿಯಲ್ಲಿ ಏರ್ಪಡಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್‍ರವರ ಪುತ್ಥಳಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿವಿಧ ಜನಾಂಗ, ಭಾಷೆ, ಧರ್ಮ ಹಲವು ಸಂಸ್ಕøತಿ ಹೊಂದಿರುವ ಭಾರತವು ಅಖಂಡ ರಾಷ್ಟ್ರವಾಗಿ ಉಳಿದು ಏಕತೆಯ ಮಹತ್ವವನ್ನು ವಿಶ್ವಕ್ಕೆ ಪ್ರಚುರ ಪಡಿಸಲು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ನಮ್ಮ ದೇಶದ ಸಂವಿಧಾನ ಕಾರಣವಾಗಿದೆಯೇ ಹೊರತು ಯಾವುದೇ ಧರ್ಮಗ್ರಂಥಗಳಿಂದಲ್ಲ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಯುವಕರು ಓದುವ ಅಭ್ಯಾಸ ಬೆಳೆಸಿಕೊಳ್ಳದೇ, ಸೋಶಿಯಲ್ ಮೀಡಿಯಾಗಳಲ್ಲಿ ನಿರತರಾಗಿ, ಪ್ರಶ್ನೆ ಮಾಡುವ ಮನೋಭಾವವನ್ನು ಕಳೆದುಕೊಳ್ಳುತ್ತಿದ್ದಾರೆ. ಯುವ ಜನತೆ ಸಂವಿಧಾನ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಅಂಬೇಡ್ಕರ್ ರವರ ವಿಚಾರಧಾರೆಗಳು, ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 2 ವಸತಿ ಶಾಲೆಗಳು ಹಾಗೂ ಅಂಬೇಡ್ಕರ್ ಭವನಗಳ ಅವಶ್ಯಕತೆಯಿದ್ದು, ಅನುದಾನ ಬಿಡುಗಡೆ ಮಾಡುವಂತೆ ದೊಡ್ಡಬಳ್ಳಾಪುರ ಶಾಸಕರು ಹಾಗೂ ಬೆಂಗಳುರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಧ್ಯಕ್ಷರಾದ ಟಿ.ವೆಂಕಟರಮಣಯ್ಯ ಅವರು ಸಮಾಜ ಕಲ್ಯಾಣ ಇಲಾಖೆ ಸಚಿವರಲ್ಲಿ ಮನವಿ ಮಾಡಿದರಲ್ಲದೆ ಜಿಲ್ಲೆಯಲ್ಲಿ ವಸತಿ ಶಾಲೆಗಳಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಿದೆ ಎಂದು ಹೇಳಿದರು.

ಚಿತ್ರದುರ್ಗದ ಶಿವ ಶರಣು ಮಾದರ ಗುರುಪೀಠದ, ಶ್ರೀ ಪರಮಪೂಜ್ಯ ಬಸವಮೂರ್ತಿ ಮಾದರ ಚೆನ್ನಯ್ಯಸ್ವಾಮಿ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಕನ್ಯಾಕುಮಾರಿ, ರೇಷ್ಮೆ ಮಂಡಳಿ ಅಧ್ಯಕ್ಷರಾದ ಹನುಮಂತರಾಯಪ್ಪ, ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಶ್ರೀವತ್ಸ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ