ಬೆಂಗಳೂರು, ಜೂ.29-ಉದ್ಯಾನನಗರಿ ಖ್ಯಾತಿಯ ಬೆಂಗಳೂರಿನಲ್ಲಿ ಕೇವಲ ಶೇ.22.6ರಷ್ಟು ಮಾತ್ರ ಹಸಿರು ಉಳಿದಿರುವುದರಿಂದ ಮಳೆ ಹಾಗೂ ಉಸಿರಾಟದ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆತಂಕ ವ್ಯಕ್ತಪಡಿಸಿದರು.
ವಸಂತನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್ -2018-19 ಪ್ರದಾನ ಸಮಾರಂಭ ಹಾಗೂ ಪರಿಸರ ಜಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನಗರದಲ್ಲಿ ಹಸಿರು ಮತ್ತು ಮರಗಳ ಸಂಖ್ಯೆ ಗಣನೀಯವಾಗಿ ಕುಸಿದಿದ್ದು, ಇದರಿಂದ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ. ಪ್ರಸ್ತುತ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಬೇಕಿದೆ.ಇಲ್ಲಿ ಬಂದಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಮಾಡಬೇಕು ಎಂದು ಕರೆ ನೀಡಿದರು.
ಬೆಂಗಳೂರಿನಲ್ಲಿ ಮರಗಳನ್ನೇ ಬಳಸಿಕೊಂಡು ಕೇಬಲ್ ಅಳವಡಿಕೆ ಮಾಡಿದ್ದ ಬಗ್ಗೆ ಕ್ರಮ ವಹಿಸಿ ಮರಗಳ ಮೇಲೆ ಹಾದು ಹೋಗಿದ್ದ 5 ಸಾವಿರ ಕಿಲೋ ಕೇಬಲ್ ಕಟ್ ಮಾಡಲಾಗಿದೆ. ಇದಲ್ಲದೆ ಅನಧಿಕೃತವಾಗಿ ಹಾಕಲಾಗಿರುವ ಕೇಬಲ್ ತೆರವು ಮಾಡಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಒಂದು ಸಣ್ಣ ಬಡ ಕುಟುಂಬದಲ್ಲಿ ಹುಟ್ಟಿ 107 ವರ್ಷದ ತಿಮ್ಮಕ್ಕ ಅವರಿಗಿರುವ ಅಪಾರ ಪರಿಸರ ಪ್ರೇಮದಿಂದಾಗಿ ಮನುಕುಲಕ್ಕೆ ಪರಿಸರ ಜಾಗೃತಿಯ ಸಂದೇಶ ರವಾನೆ ಮಾಡಿದ್ದಾರೆ ಎಂದು ಹೇಳಿದರು.
ವಿಶ್ವದ ಶ್ರೇಷ್ಠ 100 ಪ್ರತಿಭಾನ್ವಿತ ಮಹಿಳೆಯರಲ್ಲಿ ಸಾಲುಮರದ ತಿಮಕ್ಕನವರು ಪ್ರಭಾವಿಗಳೆಂದು ವ್ಯಕ್ತವಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ಮನುಕುಲಕ್ಕೆ ಪರಿಸರ ಮಾರಕವಾಗದಿರುವಂತೆ ರಸ್ತೆ ಇಕ್ಕೆಲಗಳಲ್ಲಿ ಗಿಡ ನೆಟ್ಟು, ಸಮೃದ್ಧವಾಗಿ ಅದನ್ನು ಬೆಳೆಸುವ ಕೈಂಕರ್ಯ ಎಲ್ಲರಿಗೂ ಮಾರ್ಗದರ್ಶಕವಾಗಿದೆ ಎಂದು ಶ್ಲಾಘಿಸಿದರು.
ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಅವರು ಪರಿಸರ ಸಂರಕ್ಷಣೆಗಾಗಿ ತಮ್ಮ ಜೀವಿತಾವಧಿಯನ್ನೇ ಮೀಸಲಾಗಿಟ್ಟ ಮಹಾಮಾತೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅಭಿನಂದಿಸಿದರು.
ಮರಗಳನ್ನು ಬೆಳೆಸುವ ಮೂಲಕ ಇಡೀ ವಿಶ್ವಕ್ಕೆ ಮಾದರಿಯಾಗಿರುವ ಅವರು, ಪರಿಸರ ನಾಶವಾಗುತ್ತಿರುವ ಈ ಸಂದರ್ಭದಲ್ಲಿ ತಮ್ಮ ಕೆಲಸದ ಮೂಲಕ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು.
ಇಂದು ಅಂಚೆ ಇಲಾಖೆಯಿಂದ ತಿಮಕ್ಕ ಭಾವಚಿತ್ರ ಹಾಗೂ ಮರವಿರುವ ಲಕೋಟೆ ಬಿಡುಗಡೆ ಮಾಡಿರುವುದು ಇವರ ಸೇವೆಗೆ ಸಂದಿರುವ ಗೌರವ. ಇದು ಸ್ವತಃ ತಮಗೆ ತುಂಬಾ ಸಂತೋಷ ತಂದಿದೆ ಎಂದು ತಿಳಿಸಿದರು.
ಇನ್ನೂ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್ -2018-2019 ಪ್ರದಾನ ಪ್ರಶಸ್ತಿಗೆ ಆಯ್ಕೆಯಾದವರಿಗೆ ಹಾಗೂ ಸಾಲುಮರದ ತಿಮ್ಮಕ್ಕ ಅವರ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಿದ ಅಂಚೆ ಇಲಾಖೆಯ ಜನರಲ್ ಡಾ.ಚಾರ್ಲ್ಸ್ ಲೋಬೋ ಅವರಿಗೆ ಅಭಿನಂದನೆ ಸಲ್ಲಿಸಿದರು..
ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಷನಲ್ ಫೌಂಡೇಶನ್ ವತಿಯಿಂದ ವಿವಿಧ ಕೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಸಾಧಕರಾದ ಸುಂದರ್ ಲಾಲ್ ಬಹುಗುಣ, ಶಿವಾಜಿ ಸದಾಶಿವ್ ಮೋತೆ, ಡಾ.ಎನ್ ಶಿವಶಂಕರ್, ರವೀಂದ್ರನ್ ಸೇರಿ ಹಲವರಿಗೆ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್ -2018-2019 ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಾ.ಶಿವಮೂರ್ತಿ ಮುರುಘಾಶರಣರು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ದಂಪತಿ ಮತ್ತಿತರರಿದ್ದರು.