ಮೈತ್ರಿ ಸರ್ಕಾರದ ವರ್ಚಸ್ಸಿಗೆ ಮಾರಕವಾಗಿರುವ ಮುಖ್ಯಮಂತ್ರಿಗಳ ಮಾತುಗಳು

ಬೆಂಗಳೂರು, ಜೂ.29- ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ಮೇಲೆ ಕುಮಾರಸ್ವಾಮಿ ಅವರು ಆಡಿದ ಕೆಲ ಮಾತುಗಳು ಮೈತ್ರಿ ಸರ್ಕಾರದ ವರ್ಚಸ್ಸಿಗೆ ಮಾರಕವಾಗುತ್ತಿವೆಯೇ ಎನ್ನುವ ಪ್ರಶ್ನೆ ಈಗ ದೋಸ್ತಿಗಳನ್ನು ಕಾಡತೊಡಗಿದೆ.

ಒಂದಲ್ಲ, ಎರಡಲ್ಲ, ಹತ್ತಾರು ಬಾರಿ ಕುಮಾರಸ್ವಾಮಿಯವರು ಸಾರ್ವಜನಿಕವಾಗಿ ಕಡು ಕೋಪದಿಂದ ಆಡಿದ ಮಾತುಗಳು ಸಮ್ಮಿಶ್ರ ಸರ್ಕಾರವನ್ನು ಸಂದಿಗ್ಧತೆಗೆ ತಂದು ಸಿಲುಕಿಸಿವೆ. ಇತ್ತ ಸಿಎಂ ಅವರ ಮಾತುಗಳನ್ನು ಸಮರ್ಥಿಸಲೂ ಆಗದೆ, ಅತ್ತ ಮುಖ್ಯಮಂತ್ರಿಯನ್ನು ಟೀಕಿಸಲೂ ಆಗದೆ ಇರಿಸು ಮುರಿಸು ಪರಿಸ್ಥಿತಿಯನ್ನು ಕಾಂಗ್ರೆಸ್ ಎದುರಿಸುವಂತಾಗಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿಯವರ ನಡೆ ಸಾರ್ವಜನಿಕವಾಗಿ ಸೌಜನ್ಯದಿಂದ ಕೂಡಿದ್ದರೂ ಕೆರಳಿದಾಗ ಆಡುವ ನುಡಿಗಳು ಮಾತ್ರ ಎಂತವರಿಗೂ ಕೋಪ ತರಿಸುವಂತಿವೆ ಅನ್ನೋದು ಕೆಲ ರಾಜಕಾರಣಿಗಳ ಅಭಿಪ್ರಾಯವಾಗಿದೆ. ಸನ್ನಿವೇಶಕ್ಕೆ ಅನುಗುಣವಾಗಿ ಸಿಎಂ ಮಾತನಾಡಿದ್ದರೂ ಸಾರ್ವಜನಿಕವಾಗಿ ಅದು ಅಪಾರ್ಥವನ್ನೇ ಸೃಷ್ಟಿಸುತ್ತಿದೆ.

ಹಲವು ಬಾರಿ ಕುಮಾರಸ್ವಾಮಿ ಸಿಟ್ಟಿನಿಂದ ಮಾತನಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದ ನಿದರ್ಶನಗಳೂ ಸಾಕಷ್ಟಿವೆ. ಹತೋಟಿ ತಪ್ಪಿ ಸಿಎಂ ಮಾತನಾಡಿದ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ದೋಸ್ತಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಕುಮಾರಸ್ವಾಮಿಗೆ ಕಿವಿಮಾತು ಹೇಳಿದ ಉದಾಹರಣೆಗಳೂ ಇವೆ.

ಕುಮಾರಸ್ವಾಮಿಯವರ ಮಾತಿನಿಂದ ಮೈತ್ರಿ ಪಕ್ಷ ಮುಜುಗರಕ್ಕೊಳಗಾಗಿ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಯನ್ನೂ ಮಾಡಲಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಬೆಳೆ ಸಾಲ ಮನ್ನಾ ವೇಳೆ ನಾನು ಸಾಂದರ್ಭಿಕ ಶಿಶು, ನಾನು ರಾಜ್ಯದ ಜನರ ಮುಲಾಜಿನಲ್ಲಿ ಇಲ್ಲ. ಕಾಂಗ್ರೆಸ್ಸಿಗರ ಮುಲಾಜಿನಲ್ಲಿ ಇದ್ದೇನೆ, ನಾನೊಬ್ಬ ವಿಷಕಂಠ, ತಂತಿಯ ಮೇಲೆ ನಡೆಯುತ್ತಿದ್ದೇನೆ ಎಂದು ಈ ಹಿಂದೆ ಹೇಳಿಕೆ ನೀಡಿದ್ದಾಗ ಕಾಂಗ್ರೆಸ್ ಪಕ್ಷ ಜೆಡಿಎಸ್ ಮೇಲೆ ಸವಾರಿ ಮಾಡುತ್ತಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿ ಕಾಂಗ್ರೆಸ್‍ನ ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು.

ಬಿಜೆಪಿಗೆ ಅಸ್ತ್ರ: ಮುಖ್ಯಮಂತ್ರಿ ಅವರ ಈ ಮಾತುಗಳು ಪ್ರತಿಪಕ್ಷ ಬಿಜೆಪಿಗೆ ಟೀಕಾಸ್ತ್ರವಾಗಿ ಪರಿಣಮಿಸಿದ್ದವು.ಸಿಎಂ ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದ ಒಂದು ವರ್ಷದ ಆಡಳಿತವನ್ನು ಪೂರೈಸಿದ್ದು, ಈ ಅವಧಿಯಲ್ಲಿ ಅವರಾಡಿದ ವಿವಾದಾತ್ಮಕ ಮಾತುಗಳು ದೋಸ್ತಿ ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಬಹಳ ದುಬಾರಿಯಾಗಿ ಪರಿಣಮಿಸಿವೆ. ಲೋಕಸಭಾ ಚುನಾವಣೆಯಲ್ಲಿ ಸಹ ವಿವಾದಾತ್ಮಕ ಮಾತುಗಳಿಂದ ಬೆಲೆ ತೆರಬೇಕಾಯಿತೆಂದೂ ರಾಜಕೀಯವಾಗಿ ವಿಶ್ಲೇಷಿಸಲಾಗುತ್ತಿದೆ.

ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಸೋಲಿನ ಕಹಿಯಿಂದ ಪಾಠ ಕಲಿತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದೋಸ್ತಿ ಸರ್ಕಾರದ ಮತ್ತು ತಮ್ಮ ಪಕ್ಷದ ವರ್ಚಸ್ಸು ಹೆಚ್ಚಿಸಲು ಗ್ರಾಮ ವಾಸ್ತವ್ಯ, ಜನತಾ ದರ್ಶನ ಮೂಲಕ ಜನರ ಬಳಿ ತಾವೇ ಆಡಳಿತವನ್ನು ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ.
ಇದು ಶ್ಲಾಘನೀಯವಾದರೂ ಈ ಸಂದರ್ಭದಲ್ಲಿ ಎದುರಾಗುವ ಪ್ರತಿಭಟನೆಗಳು, ಹೋರಾಟಗಳನ್ನು ನಿಭಾಯಿಸದೇ ತಾಳ್ಮೆ ಕಳೆದು ಕೊಂಡರೆ ಇಮೇಜು ದೊರೆಯುವ ಬದಲಿಗೆ ಡ್ಯಾಮೇಜು ಉಂಟಾಗುತ್ತದೆ ಎಂದೇ ಹೇಳಲಾಗುತ್ತಿದೆ.

ಸಿಎಂ ಅವರ ಕೋಪದ ಮಾತುಗಳು: ನಾನು ಸಾಂದರ್ಭಿಕ ಶಿಶು…ಜನರಿಗೆ ದಂಗೆ ಏಳಲು ಹೇಳುತ್ತೇನೆ.ನಾನು ರಾಜ್ಯದ ಜನರ ಮುಲಾಜಿನಲ್ಲಿ ಇಲ್ಲ, ಕಾಂಗ್ರೆಸ್ಸಿಗರ ಮುಲಾಜಿನಲ್ಲಿ ಇದ್ದೇನೆ. ನಾನೊಬ್ಬ ವಿಷಕಂಠ, ತಂತಿಯ ಮೇಲೆ ನಡೆಯುತ್ತಿದ್ದೇನೆ. ಪುಲ್ವಾಮಾ ದಾಳಿ ಬಗ್ಗೆ ನನಗೆ 2ವರ್ಷ ಮುಂಚೆಯೇ ಗೊತ್ತಿತ್ತು.ಬೆಳಗಾವಿಯಲ್ಲಿ ಕಬ್ಬಿನ ಬಾಕಿ ಹಣಕ್ಕೆ ಒತ್ತಾಯಿಸಿದ್ದ ಮಹಿಳೆಗೆ ನಾಲ್ಕು ವರ್ಷದಿಂದ ಎಲ್ಲಿ ಮಲಗಿದ್ದೆಯಮ್ಮ ನನಗೆ ಓಟು ಹಾಕಿದ್ದೀರಾ? ನಾನೇಕೆ ಸಹಾಯ ಮಾಡಬೇಕು..? ಊಟಕ್ಕೆ ಗತಿ ಇಲ್ಲದವರು ಸೇನೆ ಸೇರುತ್ತಾರೆ…ಉತ್ತರ ಕರ್ನಾಟಕದವರು ಬೆಂಗಳೂರಿಗರ ಋಣದಲ್ಲಿದ್ದಾರೆ.

ಬೆಳಗಾವಿಯಲ್ಲಿ ಸುವರ್ಣಸೌಧಕ್ಕೆ ನುಗ್ಗಿದ ರೈತರ ಬಗ್ಗೆ ರೈತರಲ್ಲ ಅವರು ಗೂಂಡಾಗಳು, ದರೋಡೆಕೋರರು ಮಂಡ್ಯದಲ್ಲಿ ಜೆಡಿಎಸ್ ಕಾರ್ಯಕರ್ತ ಕೊಲೆಯಾದ ಸಂದರ್ಭದಲ್ಲಿ ಪೆÇಲೀಸರಿಗೆ ಆದೇಶ ನೀಡುವಾಗ, ಕೊಲೆ ಮಾಡಿದವನನ್ನ ದಯೆ ತೋರದೇ ಶೂಟೌಟ್ ಮಾಡಿ ಬಿಡಿ ಸುಮಲತಾ ಪರ ಮಂಡ್ಯದಲ್ಲಿ ಎಡ-ಬಲ ನಿಂತು ಪ್ರಚಾರ ಮಾಡಿದ ಸ್ಟಾರ್‍ಗಳಾದ ಯಶ್ ಮತ್ತು ದರ್ಶನ್ ಕುರಿತು, ಅವರು ಜೋಡೆತ್ತುಗಳಲ್ಲ, ಕಳ್ಳೆತ್ತುಗಳು ರಾಯಚೂರು ಜಿಲ್ಲೆಯ ಗ್ರಾಮ ವಾಸ್ತವ್ಯದ ವೇಳೆ ರಸ್ತೆಗೆ ಅಡ್ಡವಾಗಿ ಪ್ರತಿಭಟಿಸಿದ ವೈಟಿಪಿಎಸ್ ಸಿಬ್ಬಂದಿ ಕುರಿತು, ವೋಟ್ ಮೋದಿಗೆ ಹಾಕ್ತೀರಾ…, ಸಮಸ್ಯೆ ನನಗೆ ಹೇಳ್ತೀರಾ….? ನಿಮ್ಮ ಮೇಲೆ ಲಾಠಿ ಚಾರ್ಜ್ ನಡೆಸಬೇಕಾ…?

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ