
ಒಸಾಕಾ: ಭಯೋತ್ಪಾದನೆ ಕೇವಲ ಪ್ರಾಣಗಳನ್ನು ಬಲಿ ಪಡೆಯುವುದಿಲ್ಲ. ಅದು ಜಗತ್ತಿನ ಸಾಮಾಜಿಕ ಸ್ಥಿರತೆ ಮತ್ತು ಆರ್ಥಿಕ ಪ್ರಗತಿಯನ್ನೇ ಬುಡಮೇಲು ಮಾಡುತ್ತದೆ ಎಂಬ ಭಾರತದ ನಿಲುವನ್ನು ಬ್ರಿಕ್ಸ್ ರಾಷ್ಟ್ರಗಳು ಬೆಂಬಲಿಸಿದ್ದು, ತಮ್ಮ ನೆಲದಲ್ಲಿ ಯಾವುದೇ ಭಯೋತ್ಪಾದನೆ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿವೆ.
ಜಪಾನಿನಲ್ಲಿ ಶುಕ್ರವಾರ ಆರಂಭಗೊಂಡ ಜಿ-20 ಶೃಂಗಸಭೆಯ ನೇಪಥ್ಯದಲ್ಲಿ ನಡೆದ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ) ಒಕ್ಕೂಟ ರಾಷ್ಟ್ರಗಳ ಮುಖ್ಯಸ್ಥರ ಅನೌಪಚಾರಿಕ ಸಭೆಯಲ್ಲಿ ಭಯೋತ್ಪಾದನೆ ಮತ್ತು ಉಗ್ರರಿಗೆ ಅಕ್ರಮವಾಗಿ ಹಣಕಾಸು ನೆರವು ನೀಡುವುದರ ವಿರುದ್ಧ ಸಮರವನ್ನೇ ಸರಲು ನಿರ್ಧರಿಸಲಾಯಿತು.
ಪಂಚ ರಾಷ್ಟ್ರಗಳ ಸಭೆಯ ಜಂಟಿ ಹೇಳಿಕೆಯಲ್ಲಿ, ಭಯೋತ್ಪಾದನೆಯ ಉದ್ದೇಶಕ್ಕೆ ಇಂಟರ್‌ನೆಟ್‌ನ ದುರುಪಯೋಗ ಮಾಡುವುದರ ವಿರುದ್ಧ ಹೋರಾಡುವ ಸಂಕಲ್ಪವನ್ನೂ ಮಾಡಲಾಗಿದೆ.
ಬ್ರಿಕ್ಸ್ ರಾಷ್ಟ್ರಗಳ ಈ ಬೆಂಬಲವು ಪಾಕಿಸ್ತಾನದ ಉಗ್ರ ಪೋಷಣೆ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ಜಾಗತಿಕವಾಗಿ ದೊಡ್ಡ ರಾಜತಾಂತ್ರಿಕ ಬಲವನ್ನು ಒದಗಿಸಿದಂತಾಗಿದೆ. ಕಳೆದ ವಾರವಷ್ಟೇ ಶಾಂಘೈ ಸಹಕಾರ ಒಕ್ಕೂಟವೂ ಭಾರತದ ಹೋರಾಟಕ್ಕೆ ಬೆಂಬಲ ನೀಡಿತ್ತು.