ಪುಣೆ, ಜೂ.29- ಧಾರಾಕಾರ ಮಳೆಯಿಂದಾಗಿ ಬಹುಅಂತಸ್ತುಗಳ ವಸತಿ ಕಟ್ಟಡವೊಂದರ ಕಾಂಪೌಂಡ್ ಗೋಡೆ ಕುಸಿದು ಹತ್ತೊಂಭತ್ತು ಮಂದಿ ಮೃತಪಟ್ಟಿರುವ ದಾರುಣ ಘಟನೆ ಪುಣೆಯಲ್ಲಿ ನಡೆದಿದೆ.
ಇಂದು ಮುಂಜಾನೆ ನಡೆದ ಈ ದುರ್ಘಟನೆಯಲ್ಲಿ ನಾಲ್ವರು ಮಕ್ಕಳು ಹಾಗೂ ಓರ್ವ ಮಹಿಳೆ ಸಹ ಸಾವಿಗೀಡಾಗಿದ್ದಾರೆ. ಗಾಯಗೊಂಡವರ ಮೂವರ ಸ್ಥಿತಿ ಶೋಚನೀಯವಾಗಿದೆ. ಭಗ್ನಾವಶೇಷಗಳ ಅಡಿ ಇನ್ನಷ್ಟು ಜನರು ಸಿಲುಕಿರುವ ಶಂಕೆಯಿದ್ದು, ಶೋಧಕಾರ್ಯ ಮುಂದುವರೆದಿದೆ. ಇದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಪುಣೆಯ ಕೊಂಧ್ವಾ ಪ್ರದೇಶದಲ್ಲಿ ಇಂದು ಮುಂಜಾನೆ 1.30ರಲ್ಲಿ ಸಂಭವಿಸಿದ ದುರಂತದಲ್ಲಿ ಹಲವಾರು ಕಾರುಗಳು ಜಖಂ ಆಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಅಪಾರ್ಟ್ಮೆಂಟ್ ಸಂಕೀರ್ಣದ ಪಕ್ಕದಲ್ಲೇ ನಿರ್ಮಾಣಗೊಂಡಿದ್ದ ತಾತ್ಕಾಲಿಕ ಶೆಡ್ಗಳಿಗೆ ಉರುಳಿ ಬಿದ್ದ ಗೋಡೆ ಅಪ್ಪಳಿಸಿ ಘೋರ ದುರಂತ ಸಂಭವಿಸಿದೆ ಎಂದು ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಅಪಾರ್ಟ್ಮೆಂಟ್ ಕಟ್ಟಡದ ಸಮೀಪ ನಿರ್ಮಾಣವಾಗುತ್ತಿದ್ದ ಮತ್ತೊಂದು ವಸತಿಸ್ತೋಮದಲ್ಲಿ ಕಾರ್ಯನಿರ್ವಹಿಸಲು ಪಶ್ಚಿಮಬಂಗಾಳ ಮತ್ತು ಬಿಹಾರದಿಂದ ಆಗಮಿಸಿದ್ದ ಕಾರ್ಮಿಕರು ಇಲ್ಲಿ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿಕೊಂಡು ಆಶ್ರಯ ಪಡೆದಿದ್ದರು. ಈ ದುರ್ಘಟನೆ ಸಂಭವಿಸಿದಾಗ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 22 ಮಂದಿ ಇಲ್ಲಿ ನಿದ್ರಿಸುತ್ತಿದ್ದರು.
ಭಾರೀ ಮಳೆಯಿಂದ ಅಪಾರ್ಟ್ಮೆಂಟ್ನ ಕಾರ್ ಪಾರ್ಕಿಂಗ್ ಲಾಟ್ನ ಕಾಂಪೌಂಡ್ ಗೋಡೆ ಕುಸಿದು ವಾಹನಗಳ ಸಮೇತ ತಾತ್ಕಾಲಿಕ ಶೆಡ್ಗಳ ಮೇಲೆ ಉರುಳಿ ಬಿತ್ತು. ಏನಾಗುತ್ತಿದೆ ಎಂಬುದನ್ನು ತಿಳಿಯುವುದಕ್ಕೆ ಮೊದಲೇ ಸಾವು- ನೋವು ಸಂಭವಿಸಿತು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (ಎನ್ಡಿಆರ್ಎಫ್)ಮತ್ತು ಅಗ್ನಿಶಾಮಕ ಇಲಾಖೆಯ ರಕ್ಷಣಾ ಸಿಬ್ಬಂದಿ ಅಪಘಾತದ ಸ್ಥಳಕ್ಕಾಗಮಿಸಿ ಅಪಾಯಕ್ಕೆ ಸಿಕ್ಕಿಕೊಂಡಿರುವ ಜನರಿಗಾಗಿ ಶೋಧ ಮುಂದುವರೆಸಿದ್ದಾರೆ. ಮಳೆಯಿಂದಾಗಿ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ.
ಈ ವರೆಗೆ 19 ಮೃತ ದೇಹಗಳನ್ನು ಹೊರ ತೆಗೆಯಲಾಗಿದ್ದು, ಗಾಯಾಳುಗಳಿಗೆ ಪುಣೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.
ವಸತಿ ಕಟ್ಟಡ ನಿರ್ಮಾಣಕ್ಕಾಗಿ ನಿಯೋಜನೆಗೊಂಡಿದ್ದ, ಕೂಲಿಕಾರ್ಮಿಕರಿಗೆ ಕಟ್ಟಡ ನಿರ್ಮಾತೃಗಳು ಸೂಕ್ತ ವಸತಿ ಸೌಕರ್ಯ ಒದಗಿಸದೆ. ಅಪಾರ್ಟ್ಮೆಂಟ್ ಕಾಂಪೌಂಡ್ ಗೋಡೆಯ ಕೆಳ ಪ್ರದೇಶದಲ್ಲಿ ತಗಡು ಶೀಟ್ಗಳ ಸುಸ್ಥಿತಿಯಲ್ಲಿಲ್ಲದ ಆಶ್ರಯ ಕಲ್ಪಿಸಿ ದುರಂತಕ್ಕೆ ಪರೋಕ್ಷ ಹೊಣೆಗಾರರಾಗಿದ್ದಾರೆ ಎಂದು ಪುಣೆ ಜಿಲ್ಲಾ ಕಲೆಕ್ಟರ್ ನವಲ್ ಕಿಶೋರ್ರಾಮ್ ಹೇಳಿದ್ದಾರೆ.
ಈ ದುರಂತ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ತಪ್ಪಿಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಕಟ್ಟಡ ನಿರ್ಮಾತೃಗಳು ಮತ್ತು ಅಪಾರ್ಟ್ಮೆಂಟ್ ಮಾಲೀಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಪುಣೆಯಲ್ಲಿ ಗುರುವಾರದಿಂದ ಭಾರಿ ಮಳೆಯಾಗುತ್ತಿದೆ. ಕಳೆದ ರಾತ್ರಿವರೆಗೆ 24 ಗಂಟೆಗಳಲ್ಲಿ 73.1 ಮಿಲಿಮೀಟರ್ ವರ್ಷಧಾರೆಯಾಗಿದೆ., ಇದು 2010 ರಿಂದ ಜೂನ್ ಬಳಿಕ ಅತಿ ಹೆಚ್ಚುಪ್ರಮಾಣದ ಮಳೆ ಎಂದು ದಾಖಲಾಗಿದೆ.