ಬೆಂಗಳೂರು, ಜೂ.28- ತಮಿಳುನಾಡು ಎಷ್ಟು ಯೋಜನೆಗಳನ್ನಾದರೂ ಮಾಡಿಕೊಳ್ಳಲಿ ನಮ್ಮ ತಕರಾರಿಲ್ಲ. ಆದರೆ ನಮ್ಮ ರಾಜ್ಯದ ಯೋಜನೆಗೆ ಅವರು ತೊಂದರೆ ಕೊಡಬಾರದು ಎಂದು ಜನ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮುದ್ರಕ್ಕೆ ಹೋಗುವ ನೀರನ್ನು ತಡೆಯಲು ಅವರು ಅಣೆಕಟ್ಟು ನಿರ್ಮಿಸಿಕೊಳ್ಳಲು ನಮ್ಮದೇನೂ ಆಕ್ಷೇಪವಿಲ್ಲ ಎಂದು ಕಾವೇರಿ ನದಿಗೆ ಬಿಳಿಗುಂಡ್ಲುವಿನ ಬಳಿ ಅಣೆಕಟ್ಟು ನಿರ್ಮಿಸುವ ತಮಿಳುನಾಡಿನ ಯೋಜನೆ ಬಗ್ಗೆ ಮೇಲಿನಂತೆ ಪ್ರತಿಕ್ರಿಯಿಸಿದರು.
ಕಾವೇರಿ ನ್ಯಾಯಾಧೀಕರಣ, ಸುಪ್ರೀಂಕೋರ್ಟ್ ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರ ಹಂಚಿಕೆ ಮಾಡಿರುವ ನಮ್ಮ ಪಾಲಿನ ನೀರನ್ನು ನಾವು ಬಳಸಿಕೊಳ್ಳತ್ತೇವೆ. 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆಗೆ ತೊಂದರೆ ಕೊಡಬಾರದು. ಸುಮಾರು 400 ಕೋಟಿ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ಕಾವೇರಿ ಜಲನಯನ ಭಾಗದಲ್ಲಿ ಉತ್ತಮ ಮಳೆಯಾಗಿ ಜಲಾಶಯಕ್ಕೆ ನೀರು ಬಂದರೆ ನೀರು ಬಿಡುವಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರ ಹೇಳಿದೆ. ಮಳೆಯ ಕೊರತೆಯಿಂದಾಗಿ ಜಲಾಶಯದಲ್ಲಿ ನೀರಿಲ್ಲದಿರುವ ಪರಿಸ್ಥಿತಿಯನ್ನು ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ.
ಲಭ್ಯವಿರುವ ನೀರಿನಿಂದ ಯಾವ ಬೆಳೆ ಬೆಳೆಯಬೇಕು, ಎಷ್ಟು ಪ್ರಮಾಣದಲ್ಲಿ ಬೆಳೆ ಬೆಳೆಯಬೇಕು ಎಂಬ ಬಗ್ಗೆ ಮಂಡ್ಯ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ರೈತರಲ್ಲಿ ಜಾಗೃತಿ ಮೂಡಿಸಬೇಕು. ಈಗ ನೀರು ಬಿಡುವುದು ನಮ್ಮ ಕೈಯಲಿಲ್ಲ. ಇಷ್ಟ ಬಂದಂತೆ ಬೆಳೆ ಬೆಳೆಯುವ ಕಾಲ ಹೋಯಿತು. ಬೆಳೆದು ನಿಂತಿರುವ ಕಬ್ಬು ಮತ್ತು ಭತ್ತದ ಬೆಳೆಗೆ ನೀರು ಬಿಡುವ ವಿಚಾರದ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.