ನವದೆಹಲಿ: ಜುಲೈ 1 ರಿಂದ ಪ್ರಾರಂಭವಾಗುವ ಅಮರನಾಥ ಯಾತ್ರೆಯ ಸುರಕ್ಷತೆ ಬಗ್ಗೆ ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿದ್ದರೂ ಯಾತ್ರೆಗೆ ಭಯೋತ್ಪಾದಕರ ದಾಳಿ ಬೆದರಿಕೆ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಮಲ್ಟಿ ಏಜೆನ್ಸಿ ಸೆಂಟರ್ ನೀಡಿರುವ ನಿರ್ದಿಷ್ಟ ಎಚ್ಚರಿಕೆಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ಗಂಡರ್ಬಲ್ ಮತ್ತು ಕಂಗನ್ ಪ್ರದೇಶಗಳ ಬೆಟ್ಟಗಳಲ್ಲಿ ಭಯೋತ್ಪಾದಕರ ಅಡಗುತಾಣಗಳ ಗುಪ್ತಚರ ವರದಿಗಳು ಬಹಿರಂಗಗೊಂಡಿವೆ. ಅಮರನಾಥ ಯಾತ್ರೆಯ ಎರಡು ಮಾರ್ಗಗಳಲ್ಲಿ ಬಾಲ್ಟಾಲ್ ಮಾರ್ಗವು ಒಂದು. ಈ ಮಾರ್ಗದಲ್ಲಿ ಜುಲೈ 1 ರಿಂದ ನದೆಯಲಿರುವ ಅಮರನಾಥ ಯಾತ್ರೆ ವೇಳೆ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆಯ ಜೈಶ್-ಎ-ಮೊಹಮ್ಮದ್(JeM) ಭಯೋತ್ಪಾದಕರು ಭದ್ರತಾ ಪಡೆಗಳನ್ನು ಗುರಿಯಾಗಿಸಬಹುದು ಎನ್ನಲಾಗಿದೆ.
ಮುಂಬರುವ ಅಮರನಾಥ ಯಾತ್ರೆಗೆ ಭದ್ರತಾ ವ್ಯವಸ್ಥೆಯಲ್ಲಿ ಯಾವುದೇ ತೊಂದರೆಯಾಗದಂತೆ ನಿಗಾ ವಹಿಸುವಂತೆ ಗೃಹ ಸಚಿವ ಅಮಿತ್ ಶಾ ಬುಧವಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಯಾತ್ರಾರ್ಥಿಗಳಿಗೆ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್ಪಿಒ) ಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಯಾತ್ರಾರ್ಥಿಗಳಿಗೆ ಸೂಚನೆ ನೀಡಿದ್ದಾರೆ.
ಗೃಹ ಸಚಿವ ಅಮಿತ್ ಶಾ ನೇತೃತ್ವದ ಪರಿಶೀಲನಾ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ವಿಶೇಷ ಕಾರ್ಯದರ್ಶಿ ಎ.ಪಿ. ಮಹೇಶ್ವರಿ, ಇಡೀ ಭೇಟಿಯ ಸಮಯದಲ್ಲಿ ಸುರಕ್ಷತಾ ಪಡೆಗಳು ಅಥವಾ ಕರ್ತವ್ಯ ನಿರತ ಸಿಬ್ಬಂದಿಗಳು ಎಂದಿಗೂ ಮೈ ಮರೆಯದಂತೆ ಸಚಿವರು ಎಚ್ಚರಿಕೆ ನೀಡಿದರು ಎಂದು ತಿಳಿಸಿದರು.
“ಹಿರಿಯ ಅಧಿಕಾರಿಗಳು ವೈಯಕ್ತಿಕವಾಗಿ ವ್ಯವಸ್ಥೆಗಳನ್ನು ಮೇಲ್ವಿಚಾರಣೆ ಮಾಡಬೇಕು. ಸುರಕ್ಷತೆಯಲ್ಲಿ ಯಾವುದೇ ಅಜಾಗರೂಕತೆಯನ್ನು ಸಹಿಸಲು ಸಾಧ್ಯವಿಲ್ಲ. ಎಸ್ಪಿಒ ಕಟ್ಟುನಿಟ್ಟಾದ ಅನುಸರಣೆ ಖಚಿತಪಡಿಸಿಕೊಳ್ಳಬೇಕು” ಎಂದು ಗೃಹ ಸಚಿವರು ಕಟ್ಟುನಿಟ್ಟಾಗಿ ಸೂಚಿಸಿರುವುದಾಗಿ ಮಹೇಶ್ವರಿ ಅವರು ತಿಳಿಸಿದರು. “ವಿಶೇಷವಾಗಿ ಸಮಯಕ್ಕೆ ಹೊರಡುವ ಬೆಂಗಾವಲುಗಳಿಗೆ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳ ಮಹತ್ವವನ್ನು” ಸಚಿವರು ಒತ್ತಿ ಹೇಳಿದರು ಎನ್ನಲಾಗಿದೆ.