ಸತ್ತವರ ಹೆಸರಿನಲ್ಲಿ ಲಕ್ಷಾಂತರ ರೂ. ಸಾಲ ನೀಡಿ ಬ್ಯಾಂಕ್ ಮ್ಯಾನೇಜರ್ ಎಸ್ಕೇಪ್

ಕೊಪ್ಪಳ: ಬ್ಯಾಂಕ್ ಅಲ್ಲಿ ಯಾವುದಾದರು ಸಾಲ ಪಡೆಯಬೇಕು ಎಂದರೆ ನೂರಾರು ಸಹಿಗಳು, ಆಧಾರ್ ಕಾರ್ಡ್, ವೋಟರ್ ಕಾರ್ಡ್, ಪ್ಯಾನ್ ಕಾರ್ಡ್, ಶ್ಯೂರಿಟಿ ಎಂದು ನೂರೆಂಟು ದಾಖಲೆಗಳನ್ನು ಕೊಟ್ಟರೂ ಒಂದು ಲಕ್ಷ ಸಾಲ ಸಿಗೋದು ಕಷ್ಟ. ಆದರೆ ಇಲ್ಲೊಬ್ಬ ಬ್ಯಾಂಕ್ ಮ್ಯಾನೇಜರ್ ಸತ್ತವರ ಹೆಸರಿನಲ್ಲಿ ಲಕ್ಷಾಂತರ ರೂ. ಸಾಲ ನೀಡಿ ಪರಾರಿಯಾಗಿದ್ದಾನೆ.

ಇಬ್ಬರು ರೈತರ ಹೆಸರಿನಲ್ಲಿ ಬರೋಬ್ಬರಿ 15,54,000 ರೂ. ವಂಚಿಸಿರುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಈ ವಂಚನೆ ಪ್ರಕರಣ ಕೊಂಚ ಭಿನ್ನವಾಗಿದೆ. ಸಣ್ಣ ಲಕ್ಷಮಪ್ಪ ಈರಪ್ಪ ಎಂಬವರ ಮೇಲೆ 8 ಲಕ್ಷ ರೂ. ಸಾಲ ಪಡೆದಿದ್ದಾರೆ. ಕಾರಟಗಿ ತಾಲೂಕಿನ ಕೆರೆ ಕಾಟಾಪುರ ಗ್ರಾಮದ ಪರಸಪ್ಪ ಎಂಬವರ ಹೆಸರಲ್ಲಿ 7.54 ಸಾವಿರ ರೂ. ಸಾಲ ತೆಗೆದುಕೊಳ್ಳಲಾಗಿದೆ. ಆದರೆ ಪರಸಪ್ಪ ಸತ್ತು ವರ್ಷಗಳೇ ಕಳೆದಿವೆ. ಆದರೂ ಸಹ ಕಾರಟಗಿಯಲ್ಲಿರುವ ಆಂಧ್ರ ಬ್ಯಾಂಕ್ ಪರಸಪ್ಪನ ಹೆಸರಿನಲ್ಲಿ ಸಾಲವನ್ನು ಕೊಟ್ಟಿದೆ.

ರಂಗಪ್ಪನ ತಂದೆ ಪರಸಪ್ಪ ಸಾವನ್ನಪ್ಪಿ ಹಲವು ವರ್ಷಗಳೇ ಕಳೆದಿವೆ. ಆದರೆ ರಂಗಪ್ಪ ಅವರಿಗೆ ತಿಳೀಯದಂತೆ 7 ಲಕ್ಷ ಹಣವನ್ನು ಸಾಲ ಕೊಟ್ಟಿದೆ. ಕಾರಟಗಿ ತಾಲೂಕಿನ ಈಳಿಗನೂರು ಗ್ರಾಮದ ಶಿವನಗೌಡ ಮತ್ತು ಬ್ಯಾಂಕ್ ಮ್ಯಾನೇಜರ್ ಸೇರಿಕೊಂಡು ಪರಸಪ್ಪನ ಹೊಲದ ಮೇಲೆ 7 ಲಕ್ಷ ರೂ. ಸಾಲವನ್ನು ತೆಗೆದುಕೊಂಡಿದ್ದಾರೆ. ಸಾಲ ತೆಗೆದುಕೊಂಡು ಎರಡು ವರ್ಷವಾದ್ರೂ ಇದು ರಂಗಪ್ಪ ಅವರಿಗೆ ಗೊತ್ತಿರಲಿಲ್ಲ. ಇತ್ತೀಚೆಗೆ ಹೊಲದ ಪಹಣಿ ತೆಗೆಸಿಕೊಂಡು ಹೋಗಲು ಬಂದಾಗ ತಮ್ಮ ಹೋಲದ ಮೇಲೆ ಸಾಲ ಇರುವುದು ಗೊತ್ತಾಗಿದೆ. ಪಹಣಿಯಲ್ಲಿನ ಸಾಲದ ಮಾಹಿತಿ ನೋಡಿ ಗಾಬರಿಗೊಂಡ ರಂಗಪ್ಪ ನೇರವಾಗಿ ಕಾರಟಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.

1992ರಲ್ಲಿ ಸಣ್ಣ ಲಕ್ಷಮಪ್ಪ ಈರಪ್ಪ ಮತ್ತು 2002ರಲ್ಲಿ ಪರಸಪ್ಪ ಬಾಲಗಂಡಪ್ಪ ಎಂಬವರು ಮೃತ ಪಟ್ಟಿದ್ದಾರೆ. ಮೃತಪಟ್ಟ ಇವರಿಬ್ಬರ ಹೆಸರಿನಲ್ಲಿ ಜಮಿನಿದ್ದು ಅನಾಮಿಕ ವ್ಯಕ್ತಿಗಳಿಬ್ಬರನ್ನು ಕರೆತಂದು ಇವರೇ ಹೊಲದ ಮಾಲೀಕರು ಎಂದು ತೋರಿಸಿ ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಕೈಜೋಡಿಸಿ ಅಕ್ರಮವಾಗಿ ವಾಮ ಮಾರ್ಗದ ಮುಖಾಂತರ ಸಾಲ ಪಡೆದು ವಂಚನೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಇತ್ತ ಬ್ಯಾಂಕ್‍ನಿಂದ ಒಂದು ರೂ. ಕೂಡ ಪಡೆಯದ ರಂಗಪ್ಪ ಮತ್ತು ಮಕ್ಕಳು ಆಂಧ್ರ ಬ್ಯಾಂಕ್ ಮಂದೆ ದಿಕ್ಕುತೋಚದೆ ನಿಂತಿದ್ದಾರೆ. ಈ ಬಗ್ಗೆ ಸ್ಥಳೀಯರು ಬ್ಯಾಂಕ್ ಮ್ಯಾನೇಜರ್ ನಡವಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ