ಬೆಂಗಳೂರು, ಜೂ.27-ದಕ್ಷಿಣ ವಿಭಾಗದ ಡಿಸಿಪಿ ಡಾ.ರೋಹಿಣಿ ಕಟೋಚ್ ಸಫಟ್ ಅವರು ರೌಡಿ ಪರೇಡ್ ಮುಂದುವರಿಸಿದ್ದು, ಇಂದೂ ಸಹ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವಿವಿ ಪುರಂ ಉಪವಿಭಾಗದ ರೌಡಿ ಪರೇಡ್ ನಡೆಸಿದ್ದಾರೆ.
ರೌಡಿಗಳ ಪರೇಡ್ಗೆ 152ಕ್ಕೂ ಹೆಚ್ಚು ರೌಡಿಗಳನ್ನು ಕರೆತರಲಾಗಿತ್ತು. ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದರೆ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಡಿಸಿಪಿ ಎಚ್ಚರಿಕೆ ನೀಡಿದ್ದಾರೆ.
ಯಾವುದೇ ರೀತಿಯ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು, ಎದುರಾಳಿ ಗುಂಪಿನ ಜತೆ ವೈಷಮ್ಯ ಬೆಳೆಸಿಕೊಳ್ಳಬಾರದು ಎಂದು ರೌಡಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಂತರ ಪ್ರಸ್ತುತ ಮಾಡುತ್ತಿರುವ ಉದ್ಯೋಗ, ಮೊಬೈಲ್ ಸಂಖ್ಯೆ, ವಾಸಸ್ಥಳ, ಆದಾಯದ ಮಾಹಿತಿಗಳನ್ನು ನೀಡುವಂತೆ ರೌಡಿಗಳಿಗೆ ಸೂಚಿಸಿದರು.
ಮೊನ್ನೆ ಸುಬ್ರಹ್ಮಣ್ಯಪುರ ಉಪವಿಭಾಗದ ರೌಡಿ ಪರೇಡ್ಅನ್ನು ಜರಗನಹಳ್ಳಿ ಶಾಲೆ ಆವರಣದಲ್ಲಿ ನಡೆಸಿ ರೌಡಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.