ನವದೆಹಲಿ, ಜೂ. 28- ದೇಶದ ಯಾವೊಬ್ಬ ಬಡ ಜನತೆ ಹಸಿವಿನಿಂದ ಬಳಲಬಾರದೆಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರ ಇನ್ನು ಮುಂದೆ ದೇಶದ ಯಾವುದೇ ಭಾಗದಲ್ಲೂ ಪಡಿತರ ಆಹಾರ ಧಾನ್ಯಗಳನ್ನು ಖರೀದಿಸಲು ಅನುಕೂಲವಾಗುವಂತೆ ಒಂದೇ ರಾಷ್ಟ್ರ, ಒಂದೇ ಪಡಿತರ ಚೀಟಿ ರಾಷ್ಟ್ರಾದ್ಯಂತ ಶೀಘ್ರದಲ್ಲೇ ಜಾರಿಯಾಗಲಿದೆ.
ಈಗಾಗಲೇ ಒಂದೇ ರಾಷ್ಟ್ರ, ಒಂದೇ ಚುನಾವಣೆ ಪರಿಕ್ಪಲನೆಯನ್ನು ಜಾರಿ ಮಾಡಲು ಮುಂದಾಗಿರುವ ಆಹಾರ ಭದ್ರತೆ ಕಾಯ್ದೆ ಯೋಜನೆಯಡಿ ದೇಶದ ಯಾವುದೇ ಭಾಗದಲ್ಲಾದರೂ ಫಲಾನುಭವಿಗಳು ಪಡಿತರ ಆಹಾರ ಧಾನ್ಯಗಳನ್ನು ಖರೀದಿಸಲು ಅನುಕೂಲವಾಗುವಂತೆ ಹಾಲಿ ಇರುವ ನಿಯಮಗಳಿಗೆ ತಿದ್ದುಪಡಿ ಮಾಡಲಿದೆ.
ಈ ಸಂಬಂಧ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾಮ್ವಿಲಾಸ್ ಪಾಸ್ವಾನ್ ಅವರು ಎಲ್ಲಾ ರಾಜ್ಯಗಳ ಇಲಾಖೆ ಕಾರ್ಯದರ್ಶಿಗಳ ಜತೆ ಮಾತುಕತೆ ನಡೆಸಿದ್ದಾರೆ. ಈಗಾಗಲೇ ಆಂಧ್ರಪ್ರದೇಶ, ಗುಜರಾತ್, ಹರಿಯಾಣಾ, ಜಾರ್ಖಂಢ್, ಕೇರಳ, ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕ ಮತ್ತು ತ್ರಿಪುರಾದಲ್ಲಿ ಈ ಯೋಜನೆ ಜಾರಿಯಲ್ಲಿದೆ.
ಇದೇ ಮಾದರಿಯನ್ನು ಆಧಾರವಾಗಿಟ್ಟುಕೊಂಡು ದೇಶದ ಎಲ್ಲ ಕಡೆಯೂ ಬಡತನ ರೇಖೆಗಿಂತ ಕೆಳಗಿರುವ ಫಲಾನುಭವಿಗಳು ಪಡಿತರ ಧಾನ್ಯಗಳನ್ನು ಖರೀದಿಸಲು ಒಂದೇ ಪಡಿತರ ಚೀಟಿಯನ್ನು ಬಳಸುವಂತೆ ಸೂಚನೆ ನೀಡಲಾಗುವುದೆಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಮಗ್ರ ನಿರ್ವಹಣೆ ಪಡಿತರ ವಿತರಣೆ ವ್ಯವಸ್ಥೆಯಡಿ ಇದನ್ನು ಜಾರಿ ಮಾಡಲಾಗುವುದು. ಕೆಲವೇ ದಿನಗಳಲ್ಲಿ ರಾಷ್ಟ್ರಾದ್ಯಂತ ಜಾರಿಯಾಗಲಿದ್ದು, ಯಾರೂ ಎಲ್ಲಿ ಬೇಕಾದರೂ ಪಡಿತರ ಆಹಾರವನ್ನು ಖರೀದಿ ಮಾಡಬಹುದು ಎಂದು ತಿಳಿಸಿದ್ದಾರೆ.
ಕೆಲವು ವಿಶೇಷ ಸಂದರ್ಭದಲ್ಲಿ ಜನರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ ಆಹಾರ ಧಾನ್ಯಗಳನ್ನು ಖರೀಸಬೇಕೆಂದರೆ ನೂರೆಂಟು ದಾಖಲೆಗಳನ್ನು ಕೇಳುತ್ತಾರೆ. ಈ ಅವ್ಯವಸ್ಥೆಯನ್ನು ತಪ್ಪಿಸುವ ಸಲುವಾಗಿಯೇ ಒಂದೇ ರಾಷ್ಟ್ರ, ಒಂದೇ ಪಡಿತರ ಜಾರಿ ಬರಲಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ದೇಶದ ಉಗ್ರಾಣಗಳಲ್ಲಿ 61.2ಮಿಲಿಯನ್ ಆಹಾರಧಾನ್ಯಗಳನ್ನು ಸಂಗ್ರಹಿಸಿಡಲಾಗಿದೆ. ಖಾಸಗಿ ಮತ್ತು ಸಾರ್ವಜನಿಕ ಗೋದಾಮುಗಳ ಮೂಲಕ ದೇಶದ ಒಟ್ಟು 81ಕೋಟಿ ಫಲಾನುಭವಿಗಳಿಗೆ ಆಹಾರ ಧಾನ್ಯಗಳನ್ನು ವಿತರಿಸುತ್ತಿದ್ದೇವೆ.
ಇನ್ನ್ನು ಮುಂದೆ ಆಹಾರ ಪಡಿತರ ವ್ಯವಸ್ಥೆಯಲ್ಲಿ ಹೆಚ್ಚು ಪಾರದರ್ಶಕತೆ ಜಾರಿಯಾಗಲಿದೆ. ಇಲಾಖೆಯಲ್ಲಿ ಭ್ರಷ್ಟಾಚಾರ ಕೊನೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.