ಬೆಂಗಳೂರು, ಜೂ.27- ನಾಳೆ ನಡೆಯುವ ಪಾಲಿಕೆ ಸಭೆಯಲ್ಲಿ ಮೇಯರ್ ಪಕ್ಕದ ಆಸನದಲ್ಲಿ ಉಪ ಮೇಯರ್ ಭದ್ರೇಗೌಡ ಕುಳಿತು ಕೊಳ್ಳುವರೇ ಇಲ್ಲವೇ ಎಂಬುದು ಭಾರೀ ಕುತೂಹಲ ಕೆರಳಿಸಿದೆ.
ಇತ್ತೀಚೆಗೆ ಭದ್ರೇಗೌಡ ಪ್ರತಿನಿಧಿಸುವ ನಾಗಪುರ ವಾರ್ಡ್ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಉಪ ಮೇಯರ್ ಪ್ರತಿನಿಧಿಸುವ ವಾರ್ಡ್ನ ಕಾಮಗಾರಿ ಉದ್ಘಾಟನೆಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮೇಯರ್ ಗಂಗಾಂಬಿಕೆ ಅವರಿಗೆ ಆಹ್ವಾನ ನೀಡಲಾಗಿತ್ತು.
ಆದರೆ ಅನ್ಯ ಕಾರಣವೊಡ್ಡಿ ಪರಮೇಶ್ವರ್ ಮತ್ತು ಗಂಗಾಂಬಿಕೆ ಅವರು ಕಾರ್ಯಕ್ರಮಕ್ಕೆ ಗೈರು ಹಾಜರಾಗಿರುವುದು ಉಪ ಮೇಯರ್ ಭದ್ರೇಗೌಡ ಅವರನ್ನು ಕೆರಳಿಸಿತ್ತು.
ಬೇರೆ ವಾರ್ಡ್ಗಳ ಕಾಮಗಾರಿ ಉದ್ಘಾಟನೆಗೆ ತೆರಳುವ ಮೇಯರ್ ಗಂಗಾಂಬಿಕೆ ಅವರು ಮೈತ್ರಿ ಪಕ್ಷದ ಸದಸ್ಯ ಅದರಲ್ಲೂ ಉಪ ಮೇಯರ್ ಪ್ರತಿನಿಧಿಸುವ ನನ್ನ ವಾರ್ಡ್ನ ಕಾಮಗಾರಿಗೆ ಅವರು ಆಗಮಿಸದಿರುವುದು ಮೈತ್ರಿ ಧರ್ಮವನ್ನು ಉಲ್ಲಂಘಿಸಿದಂತಾಗಿದೆ.
ಹೀಗಾಗಿ ಇನ್ನು ಮುಂದೆ ಮೇಯರ್ ಪಕ್ಕದ ಆಸನದಲ್ಲಿ ನಾನು ಕುಳಿತುಕೊಳ್ಳುವುದಿಲ್ಲ ಎಂದು ಭದ್ರೇಗೌಡ ಶಪಥ ಮಾಡಿದ್ದರು.
ಮುನಿಸಿಕೊಂಡಿರುವ ಭದ್ರೇಗೌಡ ಅವರನ್ನು ಸಮಾಧಾನ ಪಡಿಸಲು ಸ್ವತಃ ಪರಮೇಶ್ವರ್ ಹಾಗೂ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಮುಂದಾಗಿದ್ದರು.
ಇವರ ರಾಜಿ ಸಂಧಾನಕ್ಕೆ ಮಣಿದು ನಾಳೆ ಉಪ ಮೇಯರ್ ಭದ್ರೇಗೌಡ ಅವರು ಮೇಯರ್ ಗಂಗಾಂಬಿಕೆ ಅವರ ಪಕ್ಕದ ಆಸನದಲ್ಲಿ ಕೂರುವರೇ ಇಲ್ಲವೇ ಎನ್ನುವುದು ಕುತೂಹಲ ಕೆರಳಿಸಿದೆ.