ಬೆಂಗಳೂರು,ಜೂ.28- ಆಗಸ್ಟ್ ನಲ್ಲಿ ಜೆಡಿಎಸ್ ಕೈಗೊಳ್ಳಲಿರುವ ಪಾದಯಾತ್ರೆ ಪೂರ್ವಸಿದ್ಧತಾ ಸಭೆ ನಾಳೆ ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆಯಲಿದೆ.
ಯುವ ಕಾರ್ಯಕರ್ತರನ್ನು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ನಾಳೆ ಮಧ್ಯಾಹ್ನ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಪೂರ್ವ ಸಿದ್ದತಾ ಸಭೆಯನ್ನು ನಡೆಸಲಾಗುತ್ತಿದೆ.
ವಿಚಾರ, ವಿಕಾಸ, ವಿಶ್ವಾಸ ಎಂಬ ತ್ರಿವಿಧ ಚಿಂತನೆಯೊಂದಿಗೆ ಎರಡು ಹಂತಗಳಲ್ಲಿ ಪಾದಯಾತ್ರೆಯನ್ನು ಕೈಗೊಳ್ಳಲಾಗುತ್ತದೆ. ಕರ್ನಾಟಕದ ಜನಮನವನ್ನು ಮುಟ್ಟಲು ಪಾದಯಾತ್ರೆ ನಡೆಸಲು ಉದ್ದೇಶಿಸಿದ್ದು, ಅದರ ರೂಪುರೇಷೆಗಳನ್ನು ನಿರ್ಧರಿಸಲು ಪೂರ್ವ ಸಿದ್ದತಾ ಸಭೆಯನ್ನು ನಡೆಸಲಾಗುತ್ತಿದೆ.
ಆ.20ರಂದು ನಂಜನಗೂಡಿನಿಂದ ಪಾದಯಾತ್ರೆಯನ್ನು ಪ್ರಾರಂಭಿಸಲಾಗುತ್ತದೆ.ಅದರ ರೂಪುರೇಷೆ ಹೇಗಿರಬೇಕೆಂಬ ಬಗ್ಗೆ ನಾಳಿನ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತ ಸೇರಿದಂತೆ ಜೆಡಿಎಸ್‍ನ ಪದಾಧಿಕಾರಿಗಳು ಹಾಗೂ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.