ಜುಲೈನಲ್ಲಿ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ

ಬೆಂಗಳೂರು,ಜೂ.28-ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನವನ್ನು ಜುಲೈನಲ್ಲಿ ನಡೆಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಜುಲೈ 2ನೇ ವಾರದಿಂದ ವಿಧಾನಸಭೆ ಮತ್ತು ವಿಧಾನಪರಿಷತ್ ಅಧಿವೇಶನ ಪ್ರಾರಂಭಿಸುವ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.

ಇತ್ತೀಚೆಗೆ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ ವಾಲ್ಮೀಕಿ ಸಮುದಾಯದ ಬೇಡಿಕೆ ಬಗ್ಗೆಯೂ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಲಿದ್ದು, ಈ ಸಂಬಂಧ ಸಂಪುಟ ಉಪಸಮಿತಿ ರಚಿಸುವ ಸಾಧ್ಯತೆಗಳಿವೆ.

ರಾಮನಗರ ತಾಲ್ಲೂಕಿನ ಕನಕಪುರದಲ್ಲಿ 300 ಹಾಸಿಗೆಗಳ ಆಸ್ಪತ್ರೆ, ಹೊಸ ವೈದ್ಯಕೀಯ ಕಾಲೇಜು, ಬಾಲಕ ಬಾಲಕಿಯರ ವಿದ್ಯಾರ್ಥಿನಿಲಯಗಳು, ಬೋಧಕ-ಬೋಧಕೇತರ ಸಿಬ್ಬಂದಿಯ ವಸತಿಗೃಹ ನಿರ್ಮಾಣ ಸೇರಿದಂತೆ ಇತರೆ ಅಗತ್ಯ ಸೌಲಭ್ಯಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾಮಗಾರಿಗಳನ್ನು 450 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೆತ್ತಿಕೊಳ್ಳಲು ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.

2020-21ನೇ ಶೈಕ್ಷಣಿಕ ಸಾಲಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಬರುವ ಐದು ಜಿಲ್ಲಾಸ್ಪತ್ರೆ ಹಾಗೂ ಐದು ತಾಲ್ಲೂಕು ಆಸ್ಪತ್ರೆಗಳಲ್ಲಿ ಡಿಎನ್‍ಬಿ ಕೋರ್ಸ್‍ಗಳನ್ನು ಪ್ರಾರಂಭಿಸಲು 16.71 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡುವ ಸಾಧ್ಯತೆಗಳಿವೆ.

ಜೆ.ಎಂ.ನರ್ಮ್ ಯೋಜನೆಯಡಿ ಕೈಗೆತ್ತಿಕೊಂಡಿರುವ ಮೈಸೂರಿನ ನೀರು ಪೂರೈಕೆ ವಿತರಣೆ ವ್ಯವಸ್ಥೆಯ ಪುನರ್ ರಚನೆಗಾಗಿ 229.93 ಕೋಟಿ ರೂ.ಗಳ ಪರಿಷ್ಕøತ ಅಂದಾಜಿಗೆ ಅನುಮೋದನೆ ನೀಡಲಿದೆ.

ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿ ಇರುವ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಹಾಗೂ ನೇರ ನೇಮಕಾತಿಯಲ್ಲಿ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟಿಸುವ ಸಂಬಂಧ ಸಿವಿಲ್ ಸೇವೆಗಳ ನೇಮಕಾತಿ ನಿಯಮಗಳ ತಿದ್ದುಪಡಿ ತರುವುದಕ್ಕೆ ಸಂಪುಟ ಒಪ್ಪಿಗೆ ನೀಡುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ