ಒಸಾಕಾ, ಜೂ.28- ಅಮೆರಿಕ ಮತ್ತು ಚೀನಾ ನಡುವಣ ವಾಣಿಜ್ಯ ಸಮರ ಮತ್ತು ಇರಾನ್ ಉದ್ವಿಗ್ನತೆ, ವಾತಾವರಣ ಬದಲಾವಣೆ, ಭಯೋತ್ಪಾದನೆ ಮೊದಲಾದ ಆತಂಕಗಳ ನಡುವೆ ಜಪಾನ್ನ ಒಸಾಕಾದಲ್ಲಿ ಇಂದಿನಿಂದ ಎರಡು ದಿನಗಳ ಜಿ-20 ಶೃಂಗಸಭೆ ಆರಂಭವಾಗಿದೆ.
ಜಿ-20 ಶೃಂಗ ಸಭೆಯಲ್ಲಿ, ಇವುಗಳೇ ಪ್ರಧಾನ ಚರ್ಚೆಯ ವಿಷಯಗಳೂ ಆಗಲಿವೆ. ಜೊತೆಗೆ ಉತ್ತರ ಕೊರಿಯಾದ ಅಣ್ವಸ್ತ್ರ ವಾದ, ವೆನಿಜುವೆಲಾದಲ್ಲಿ ಎದುರಾಗಿರುವ ಆರ್ಥಿಕ ಸಂಕಷ್ಟ ಮತ್ತು ವಿಶ್ವದ ಆರ್ಥಿಕತೆ ಕುಂಠಿತ-ಈ ಗಂಭೀರ ಸಮಸ್ಯೆಗಳೂ ಪ್ರಸ್ತಾಪವಾಗಲಿವೆ.
ಅಮೆರಿಕ ಮತ್ತು ಚೀನಾ ನಡುವೆ ಉಲ್ಬಣಗೊಂಡಿರುವ ವಾಣಿಜ್ಯ ಸಮರ, ಇರಾನ್ ಮತ್ತು ಅಮೆರಿಕ ನಡುವೆ ಪ್ರಕ್ಷುಬ್ಧಮಯ ವಾತಾವರಣದಿಂದ ಯುದ್ದದ ಆತಂಕ, ವಿವಿಧ ದೇಶಗಳಲ್ಲಿನ ಆರ್ಥಿಕ ಬಿಕ್ಕಟ್ಟು, ಅಣ್ವಸ್ತ್ರಗಳ ವಿಚಾರದಲ್ಲಿ ಉತ್ತರ ಕೊರಿಯಾದ ಹಠಮಾರಿತನ, ದೊಡ್ಡ ಪಿಡುಗಾಗಿಯೇ ಮುಂದುವರಿದ ಭಯೋತ್ಪಾದನೆ, ಜಾಗತಿಕ ಆರ್ಥಿಕ ಹಿಂಜರಿತ-ಇವೇ ಮೊದಲಾದ ವಿಷಯಗಳು ಜಿ-20 ಶೃಂಗಸಭೆಯಲ್ಲಿ ಮುಖ್ಯವಾಗಿ ಚರ್ಚೆಯಾಗಲಿವೆ ಎಂದು ಈಗಾಗಲೇ ವಿಶ್ಲೇಶಿಸಲಾಗಿತ್ತು.
ಆಸ್ಟ್ರೇಲಿಯಾ, ಕೆನಡಾ, ಸೌದಿ ಅರೇಬಿಯಾ, ಅಮೆರಿಕ, ಭಾರತ, ರಷ್ಯಾ, ದಕ್ಷಿಣಾ ಆಫ್ರಿಕಾ, ಟರ್ಕಿ, ಅರ್ಜೆಂಟೈನಾ, ಬ್ರೆಜಿಲ್, ಮೆಕ್ಸಿಕೋ, ಫ್ರಾನ್ಸ್, ಜರ್ಮನಿ, ಇಟಲಿ, ಇಂಗ್ಲೆಂಡ್, ಚೀನಾ, ಇಂಡೋನೆಷ್ಯಾ, ಜಪಾನ್ ಮತ್ತು ಉತ್ತರ ಕೊರಿಯಾ-ಇವು ಜಿ-20 ಸದಸ್ಯ ದೇಶಗಳಾಗಿವೆ. ಈ ಎಲ್ಲ ದೇಶಗಳ ಮುಖಂಡರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಜಪಾನ್ ಪ್ರಧಾನಿ ಸಿಂಜೋ ಅಬೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಜಿನ್ ಪಿಂಗ್, ಸೌದಿ ರಾಜಕುಮಾರ ಸಲ್ಮಾನ್ ಈ ಸಮಾವೇಶದ ಪ್ರಮುಖ ಆಕರ್ಷಣೆಯ ನಾಯಕರಾಗಿದ್ದಾರೆ.
ಜಿ-20 ಶೃಂಗಸಭೆಗೂ ಮುನ್ನ ಎಲ್ಲ 20 ದೇಶಗಳ ಮುಖಂಡರು ಗ್ರೂಪ್ ಪೋಟೋ ಸೆಷನ್ನಲ್ಲಿ ಪಾಲ್ಗೊಂಡರು.