ಬೆಂಗಳೂರು, ಜೂ. 28- ಕೆಲಸ ಮಾಡುವವರು ನಾವು, ಆದರೆ ಬಿಜೆಪಿಗೆ ಮಾತ್ರ ಮತ ಹಾಕುತ್ತೀರ ಎಂಬ ಸಿದ್ದರಾಮಯ್ಯನವರ ಹೇಳಿಕೆ ವಿರುದ್ಧ ಬಿಜೆಪಿ ಮುಗಿಬಿದ್ದಿದೆ.
ಅಲ್ಲದೆ ಬಿಜೆಪಿ ಈಸ್ಟ್ ಇಂಡಿಯಾ ಕಂಪನಿಯ ಪ್ರತಿರೂಪ ಎಂಬ ಸಿದ್ದರಾಮಯ್ಯನವರ ಟ್ವಿಟ್ಗೂ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಈ ಸಂಬಂಧ ಶೋಭಾ ಕರಂದ್ಲಾಜೆ ಟ್ವಿಟ್ ಮಾಡಿದ್ದು, ಲೋಕಸಭೆ ಚುನಾವಣೆ ಮುಗಿದ ನಂತರವೂ ಕಾಂಗ್ರೆಸ್ ಜನಾದೇಶವನ್ನು ಒಪ್ಪಿಕೊಳ್ಳಲು ಸಿದ್ದವಿಲ್ಲ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನನ್ನ ಬಳಿ ಸಮಸ್ಯೆಯನ್ನು ಹೊತ್ತು ಬರುತ್ತೀರಿ. ಚುನಾವಣೆಯಲ್ಲಿ ಮೋದಿಗೆ ಮತ ಹಾಕುತ್ತೀರಿ ಎಂದು ಹೇಳುತ್ತಾರೆ.
ಸಿದ್ದರಾಮಯ್ಯನವರು ಕೂಡ ಇದೇ ಧಾಟಿಯಲ್ಲಿ ಮಾತನಾಡಿದ್ದಾರೆ. ಜನಾದೇಶವನ್ನು ಒಪ್ಪಿಕೊಳ್ಳದವರು, ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದ್ದಾರೆ.
ಜನರು ನಿಮ್ಮ ಬಳಿ ಅಧಿಕಾರವಿದೆ ಎಂಬ ಕಾರಣಕ್ಕಾಗಿಯೇ ಬರುತ್ತಾರೆ. ಆದರೆ ಅವರಿಗೆ ನೀವು ಮತ ಹಾಕಿಲ್ಲ ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ.
ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ಹಿಂದಿನ ಕಾಂಗ್ರೆಸ್ ಸರ್ಕಾರದ ಕರುಣಾಜನಕ ಕಥೆಯನ್ನು ಬಿಂಬಿಸುವಂತಿದೆ.
ಇತ್ತೀಚೆಗೆ ಎರಡು ಪಕ್ಷಗಳ ನಾಯಕರ ಹೇಳಿಕೆಗಳು ನಿಮ್ಮ ಸೊಕ್ಕಿನ ಮನಸ್ಥಿತಿಯನ್ನು ತೋರಿಸುತ್ತದೆ. ಯಾವ ಕಾರಣಕ್ಕೂ ನಿಮಗೆ ಕ್ಷಮೆ ಎನ್ನುವುದು ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇನ್ನು ಈಶ್ವರಪ್ಪ ಕೂಡ ಸಿದ್ದರಾಮಯ್ಯ ಹೇಳಿಕೆಗೆ ಕೆಂಡಕಾರಿದ್ದಾರೆ. ಕೆಲಸ ಮಾಡಲು ನಾವು ಬೇಕು, ಮತ ಹಾಕಲು ಬಿಜೆಪಿ ಬೇಕೇ ಎಂದು ಹೇಳಿದ್ದೀರಿ. ನರೇಂದ್ರ ಮೋದಿ ಬಾಲಕೋಟ್ನಲ್ಲಿ ದಾಳಿ ನಡೆದಾಗ ಬಂದೂಕು ಹಿಡಿದು ಕೊಂಡು ಹೋಗಿದ್ದರು ಎಂದು ಪ್ರಶ್ನಿಸಿದ್ದೀರಿ. ಚುನಾವಣೆ ಬಂದಾಗ, ನೀವು ಮಣ್ಣು ತಿನ್ನುತ್ತಿದ್ದೀರಾ. ಜನ ನಿಮಗೆ ಸರಿಯಾದ ಪಾಠವನ್ನು ಕಲಿಸಿದ್ದಾರೆ ಎಂದು ಟ್ವಿಟ್ ಮೂಲಕ ಟಾಂಗ್ ನೀಡಿದ್ದಾರೆ.