ಕಸ ವಿಲೇವಾರಿ ಅವ್ಯವಹಾರ ಎಸಿಬಿ ತನಿಖೆಗೆ

ಬೆಂಗಳೂರು,ಜೂ.28- ಬಿಬಿಎಂಪಿಯಲ್ಲಿ ತ್ಯಾಜ್ಯ ವಿಲೇವಾರಿ ವಿಭಾಗದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂ. ಅವ್ಯವಹಾರ ಕುರಿತಂತೆ ಪಾಲಿಕೆ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ನೀಡಿದ ದೂರನ್ನು ಆಧರಿಸಿ ಸರ್ಕಾರ ಇಡೀ ಪ್ರಕರಣವನ್ನು ಎಸಿಬಿ ತನಿಖೆಗೆ ವಹಿಸಿ ಸರ್ಕಾರ ಆದೇಶ ಹೊರಡಿಸಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿಗೆ ಖರ್ಚು ಮಾಡಲಾಗುತ್ತಿದ್ದ 385 ಕೋಟಿ ರೂ. ವೆಚ್ಚವನ್ನು ಇಲಾಖಾ ವತಿಯಿಂದ ನಿರ್ವಹಣೆ ಹೆಸರಿನಲ್ಲಿ 1166 ಕೋಟಿ ರೂ.ಗಳಿಗೆ ಹೆಚ್ಚಳ ಮಾಡಿ ಕೋಟಿ ಕೋಟಿ ರೂ. ಲೂಟಿ ಹೊಡೆಯಲಾಗುತ್ತಿದೆ ಎಂದು ಎನ್.ಆರ್.ರಮೇಶ್ ಅವರು ದಾಖಲೆ ಸಮೇತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿದ್ದರು.

ಇದರ ಜೊತೆಗೆ 6600 ಪೌರಕಾರ್ಮಿಕರ ವೇತನದ ಹೆಸರಿನಲ್ಲಿ 550 ಕೋಟಿ ಹಾಗೂ ಪಿಎಫ್, ಇಎಸ್‍ಐ ಪಾವತಿ ಹೆಸರಿನಲ್ಲಿ 384 ಕೋಟಿ ರೂ.ಗಳನ್ನು ಗುತ್ತಿಗೆದಾರರು ವಂಚಿಸಿದ್ದಾರೆ ಎಂದು ಸರ್ಕಾರಕ್ಕೆ ದೂರು ನೀಡಿದ್ದ ಬಿಬಿಎಂಪಿ ಆಯುಕ್ತರು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವಂತೆ ಮನವಿ ಮಾಡಿಕೊಂಡಿದ್ದರು.

ಆಯುಕ್ತರು ಸಲ್ಲಿಸಿರುವ ದೂರಿಗೂ, ಎನ್.ಆರ್.ರಮೇಶ್ ಮಾಡಿರುವ ಆರೋಪಕ್ಕೂ ಸಾಮ್ಯತೆ ಇರುವುದನ್ನು ಸರ್ಕಾರ ಮನಗಂಡಿದೆ.

ಈ ಎರಡೂ ದೂರುಗಳನ್ನು ಪರಿಶೀಲಿಸಿದರೆ ಬಿಬಿಎಂಪಿಯಲ್ಲಿ ಭಾರೀ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ಎರಡೂ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ಸರ್ಕಾರ ಎಸಿಬಿಗೆ ಆದೇಶಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ