ಬೆಂಗಳೂರು, ಜೂ.27- ರಾಜ್ಯದ ಮಹತ್ವದ ಸಚಿವ ಸಂಪುಟ ಸಭೆ ನಾಳೆ (ಜೂ.28) ಮಧ್ಯಾಹ್ನ 12.30ಕ್ಕೆ ವಿಧಾನಸೌಧದಲ್ಲಿ ನಡೆಯಲಿದ್ದು, ಜಿಂದಾಲ್ ಕಂಪೆನಿಗೆ ಭೂ ಪರಭಾರೆ, ವಾಲ್ಮೀಕಿ ಸಮುದಾಯದ ಮೀಸಲಾತಿ ಸೇರಿದಂತೆ ಅನೇಕ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ.
ಜಿಂದಾಲ್ ಕಂಪೆನಿಗೆ ಭೂ ಪರಭಾರೆ ಹಾಗೂ ವಾಲ್ಮೀಕಿ ಸಮಾಜದ ಮೀಸಲಾತಿ ವಿಚಾರ ಪ್ರಸ್ತುತ ಇಡೀ ರಾಜ್ಯದ ಗಮನ ಸೆಳೆದಿರುವ ಪ್ರಮುಖ ವಿಚಾರಗಳು. ಈಗಾಗಲೇ ಜಿಂದಾಲ್ಗೆ ಭೂ ಪರಭಾರೆಯನ್ನು ವಿರೋಧಿಸಿ ಬಿಜೆಪಿ ಎರಡು ದಿನ ಅಹೋರಾತ್ರಿ ಧರಣಿ ನಡೆಸಿ ಇಡೀ ರಾಜ್ಯದ ಗಮನ ಸೆಳೆದಿತ್ತು. ಅಲ್ಲದೆ ಆಡಳಿತ ಸರ್ಕಾರದಲ್ಲೇ ಈ ವಿಚಾರದ ಕುರಿತಾಗಿ ಅನೇಕ ನಾಯಕರು ಈಗಾಗಲೇ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ಚರ್ಚೆಯಾಗಲಿದೆ ಅಲ್ಲದೆ, ಈ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಇನ್ನೂ ವಾಲ್ಮೀಕಿ ಸಮಾಜದ ಮೀಸಲಾತಿ ವಿಚಾರವೂ ಪ್ರಸ್ತುತ ದೊಡ್ಡ ಮಟ್ಟ ಚರ್ಚೆಗೆ ಕಾರಣವಾಗಿದ್ದು ಸಭೆಯಲ್ಲಿ ಮೀಸಲಾತಿ ಪರಾಮರ್ಶೆಗೆ ತಜ್ಞರ ಸಮಿತಿ ಅಥವಾ ಅಧ್ಯಯನ ಆಯೋಗ ರಚಿಸಿ ಅದರ ವರದಿ ಆಧಾರದ ಮೇಲೆ ರಾಜ್ಯ ಸರ್ಕಾರ ಮೀಸಲಾತಿ ಕುರಿತು ಕ್ರಮ ಜರುಗಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಇದಲ್ಲದೆ, ಶರಾವತಿ ಮತ್ತು ಅಘನಾಶಿನಿ ನದಿಯಿಂದ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ವಿಚಾರ ಹಾಗೂ ಮಳೆಗಾಲದ ಅಧಿವೇಶನಕ್ಕೆ ದಿನಾಂಕವನ್ನು ತುರ್ತಾಗಿ ನಿಗದಿ ಮಾಡಬೇಕಾದ ಅವಶ್ಯಕತೆ ರಾಜ್ಯ ಸರ್ಕಾರದ ಮೇಲಿದ್ದು, ಈ ಕುರಿತು ಸಹ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.