ಬೆಂಗಳೂರು, ಜೂ.26-ಮತ ಯಂತ್ರಗಳಲ್ಲಿ ಸಾಕಷ್ಟು ದೋಷಗಳು ಕಂಡು ಬಂದಿರುವುದರಿಂದ ಅದನ್ನು ಬದಲಾಯಿಸಿ ಮೊದಲಿನಂತೆ ಮತ ಪತ್ರ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ಮಹಿಳಾ ಕಾಂಗ್ರೆಸ್ ಪತ್ರ ಚಳವಳಿಯನ್ನು ನಡೆಸಿದೆ.
ಇಂದು ಬೆಳಗ್ಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್ನಾಥ್ ನೇತೃತ್ವದಲ್ಲಿ ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿ ಪತ್ರ ಚಳವಳಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪುಷ್ಪಾ ಅಮರ್ನಾಥ್, ಮುಂದುವರೆದ ದೇಶಗಳು ಕೂಡ ಮತಯಂತ್ರದ ಚುನಾವಣೆಯನ್ನು ಕೈಬಿಟ್ಟು ಮತ ಪತ್ರದ ಚುನಾವಣೆಯನ್ನು ಅಳವಡಿಸಿಕೊಂಡಿವೆ. ಇವಿಎಂನಲ್ಲಿ ಸಾಕಷ್ಟು ಲೋಪದೋಷಗಳು ಕಂಡುಬಂದಿವೆ. ಹೀಗಾಗಿ ಪಾರದರ್ಶಕವಾಗಿ ಚುನಾವಣೆ ನಡೆದಿದೆ ಎಂಬ ನಂಬಿಕೆ ಉಳಿದಿಲ್ಲ ಎಂದು ಹೇಳಿದರು.
ರಾಜ್ಯ ಮಹಿಳಾ ಕಾಂಗ್ರೆಸ್ ರಾಷ್ಟ್ರಪತಿಯವರಿಗೆ ಒಂದು ಲಕ್ಷ ಪತ್ರ ಬರೆಯುವ ಮೂಲಕ ಮತಪತ್ರ ವ್ಯವಸ್ಥೆಯನ್ನೇ ಚುನಾವಣೆಯಲ್ಲಿ ಮರು ಜಾರಿಗೆ ತರುವಂತೆ ಒತ್ತಾಯಿಸಿದೆ ಎಂದು ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ಖಂಡ್ರೆ, ಶಾಸಕರಾದ ಸೌಮ್ಯರೆಡ್ಡಿ, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಮಂಜುಳಾನಾಯ್ಡು ಸೇರಿದಂತೆ ಬೆಂಗಳೂರು ನಗರ ಜಿಲ್ಲಾಧ್ಯಕ್ಷರು, ಮಹಿಳಾ ಘಟಕದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.