ಅಭಿವೃದ್ಧಿಯತ್ತ ದಾಪುಗಾಲು ಇಟ್ಟಿರುವ ರೈತ ಉತ್ಪಾದಕ ಸಂಸ್ಥೆಗಳು

ಬೆಂಗಳೂರು,ಜೂ.26- ಕೃಷಿಯನ್ನು ಉದ್ಯಮವನ್ನಾಗಿ ಬೆಳೆಸಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಸಲುವಾಗಿ ಸ್ಥಾಪನೆಗೊಂಡಿರುವ ರೈತ ಉತ್ಪಾದಕ ಸಂಸ್ಥೆಗಳು ಅಭಿವೃದ್ದಿಯತ್ತ ದಾಪುಗಾಲು ಇಟ್ಟಿವೆ.

ಕರ್ನಾಟಕದಲ್ಲಿ ನಬಾರ್ಡ್ ಸಂಸ್ಥೆ ಸುಮಾರು 250, ತೋಟಗಾರಿಕೆ ಇಲಾಖೆ 99, ಕೃಷಿ ಇಲಾಖೆ 30 ಸೇರಿದಂತೆ ಸುಮಾರು 300ಕ್ಕೂ ಕರ್ನಾಟಕ ರೈತ ಉತ್ಪಾದಕರ ಸಂಸ್ಥೆಗಳು ಅಸ್ತಿತ್ವದಲ್ಲಿವೆ.

2010-11ರಲ್ಲಿ ಕೇಂದ್ರ ಸರ್ಕಾರ ರೈತ ಉತ್ಪಾದಕರ ಸಂಸ್ಥೆಗಳನ್ನು ಸ್ಥಾಪಿಸಿತ್ತು. 2014-15ರಲ್ಲಿ ರಾಜ್ಯ ಸರ್ಕಾರ ಇವುಗಳನ್ನು ಅಸ್ತಿತ್ವಕ್ಕೆ ತಂದಿದೆ. ಕೇಂದ್ರ ಸರ್ಕಾರದ ಕಾನೂನಿನ ಪ್ರಕಾರ ಕೃಷಿ ಚಟುವಟಿಕೆಗಳ ಸಂಪೂರ್ಣ ವ್ಯವಹಾರವನ್ನು ರೈತರೇ ನಿರ್ವಹಿಸಲು ಅನುಕೂಲವಾಗುವಂತೆ ಕಾನೂನನ್ನು ಮಾರ್ಪಡಿಸಲಾಗಿದೆ.

ಕೇಂದ್ರ ಸರ್ಕಾರ ಕಾರ್ಪೊರೇಟ್ ಅಫೈರ್ ಇಲಾಖೆಯಲ್ಲಿ ಕಂಪನಿ ಆ್ಯಕ್ಟ್ ಅಡಿಯಲ್ಲೇ ರೈತ ಉತ್ಪಾದಕ ಸಂಸ್ಥೆಗಳು ನೋಂದಣಿಯಾಗುವ ಮೂಲಕ ವ್ಯವಹಾರ ಜಗತ್ತಿಗೆ ಹೊಂದಿಕೊಳ್ಳುತ್ತವೆ. ಪ್ರತಿಯೊಂದು ರೈತ ಉತ್ಪಾದಕ ಸಂಸ್ಥೆ (ಎಫ್‍ಪಿಒ)ಗಳು ಸುಮಾರು 100ರಿಂದ 150 ಸ್ವಸಹಾಯ ಗುಂಪುಗಳ ಮಾದರಿಯ ಸಣ್ಣ ಸಂಘಟನೆಗಳನ್ನು ಹೊಂದಿರುತ್ತದೆ. ಸಣ್ಣ ಸಂಘಟನೆಗಳಲ್ಲಿ ಆಂತರಿಕ ಚುನಾವಣೆ ಮೂಲಕ 12 ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳುತ್ತವೆ.

ಆಯ್ಕೆಯಾದ ನಿರ್ದೇಶಕರ ಪೈಕಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಿಕೊಳ್ಳಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳನ್ನು ಎಫ್‍ಪಿಒಗಳು ಆಂತರಿಕವಾಗಿಯೇ ನಡೆಸಿಕೊಳ್ಳುತ್ತವೆ. ಇದರಲ್ಲಿ ಎಲ್ಲಿಯೂ ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ.
ಎಫ್‍ಪಿಒ ಉದ್ದೇಶ: ಕೃಷಿ ಉತ್ಪಾದಕರಿಂದ ನೇರವಾಗಿ ಗ್ರಾಹಕರಿಗೆ ಕೃಷಿ ಉತ್ಪನ್ನಗಳನ್ನು ತಲುಪಿಸುವ ವ್ಯವಸ್ಥಿತ ಮಾರುಕಟ್ಟೆ ಸೃಷ್ಟಿಸುವುದು, ಕೃಷಿಯ ವೆಚ್ಚವನ್ನು ಕಡಿಮೆ ಮಾಡುವುದು ಈ ಸಂಸ್ಥೆಗಳ ಮೂಲ ಉದ್ದೇಶವಾಗಿದೆ.

ಪ್ರತಿಯೊಂದು ಎಫ್‍ಪಿಒಗಳು ತಮ್ಮದೇ ಆದಂತಹ ಸಂಪರ್ಕ ಜಾಲವನ್ನು ರೂಪಿಸಿಕೊಳ್ಳುತ್ತಿದ್ದು, ರೈತರಿಗೆ ಬೇಕಾದ ಗೊಬ್ಬರ, ಬೀಜ, ಟ್ರ್ಯಾಕ್ಟರ್ ಸೇರಿದಂತೆ ಇತರ ಕೃಷಿ ಸಲಕರಣೆಗಳನ್ನು ಉತ್ಪಾದಕರಿಂದ ನೇರವಾಗಿ ಖರೀದಿಸಿ ಒಂದೆಡೆ ದಾಸ್ತಾನು ಮಾಡಿಕೊಳ್ಳಲಿದ್ದು, ರೈತರಿಗೆ ಉತ್ಪಾದಕರ ದರದಲ್ಲೇ ಮಾರಾಟ ಮಾಡಲಿದೆ.

ಮಧ್ಯವರ್ತಿಗಳ ಪ್ರಮಾಣ ಕಡಿಮೆ ಇರುವುದರಿಂದ ಮುಕ್ತ ಮಾರುಕಟ್ಟೆಯಲ್ಲಿ ಸಿಗುವ ದರಕ್ಕಿಂತಲೂ ಬೀಜ, ರಸಗೊಬ್ಬರಗಳು ಕಡಿಮೆ ದರಕ್ಕೆ ರೈತರಿಗೆ ಸಿಗಲಿವೆ.

ಕೃಷಿ ಪರಿಕರಗಳನ್ನು ಕಡಿಮೆ ಬಾಡಿಗೆ ದರದಲ್ಲಿ ಒದಗಿಸುವುದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗಲಿದೆ. ಹಾಪ್‍ಕಾಪ್ಸ್ ಮಾದರಿಯಲ್ಲಿ ಮಾರುಕಟ್ಟೆಯನ್ನು ಅಭಿವೃದ್ದಿಪಡಿಸಿ ಕೃಷಿಕರಿಂದ ನೇರವಾಗಿ ಗ್ರಾಹಕರಿಗೆ ಕೃಷಿ ಉತ್ಪನ್ನಗಳನ್ನು ಕಲ್ಪಿಸುವ ಪ್ರಯತ್ನಗಳು ನಡೆಯುತ್ತಿವೆ. ಸದ್ಯದ ವ್ಯವಸ್ಥೆಯಲ್ಲಿ ದೊಡ್ಡ ದೊಡ್ಡ ಮಾರುಕಟ್ಟೆ ಹೊಂದಿರುವ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡು ವ್ಯವಹಾರ ನಡೆಸಲಾಗುತ್ತದೆ ಕಾಲಾನಂತರ ತಮ್ಮದೇ ಆದ ಮಾರುಕಟ್ಟೆ ವ್ಯವಸ್ಥೆ ರೂಪಿಸಿಕೊಳ್ಳಲು ಎಫ್‍ಪಿಒ ಬುನಾದಿ ಹಾಕಿವೆ.

ಎಫ್‍ಪಿಒಗಳ ಸ್ಥಾಪನೆ ಮತ್ತು ಆರಂಭಿಕ ನಿರ್ವಹಣೆಗಾಗಿ ಕೃಷಿ ಇಲಾಖೆ ಆರಂಭದಲ್ಲಿ 35 ಲಕ್ಷ ರೂ.ಗಳ ಅನುದಾನವನ್ನು ಒದಗಿಸಿದೆ. 15 ಲಕ್ಷ ರೂ.ದುಡಿಯುವ ಬಂಡವಾಳ ನೀಡಲಾಗುತ್ತಿದೆ.ಯಂತ್ರೋಪಕರಣಗಳ ಖರೀದಿಗೆ 25 ಲಕ್ಷ ರೂ.ಗಳ ಆರ್ಥಿಕ ನೆರವನ್ನು ಒದಗಿಸಲಾಗುತ್ತಿದೆ.

ನಬಾರ್ಡ್ ಸಂಸ್ಥೆ ಆರಂಭಿಕ ನಿಧಿಯನ್ನಾಗಿ 9-10 ಲಕ್ಷ ರೂ.ಗಳ ಅನುದಾನವನ್ನು ನೀಡುತ್ತಿದೆ.ಕೃಷಿ ಇಲಾಖೆ, ರೇಷ್ಮೆ ಇಲಾಖೆ ವ್ಯಾಪ್ತಿಯಲ್ಲೂ ಈ ರೀತಿಯ ಎಫ್‍ಪಿಒಗಳು ಸ್ಥಾಪನೆಯಾಗುತ್ತಿದ್ದು, ಅನುದಾನವನ್ನು ಸರ್ಕಾರ ನೀಡಿದೆ.

ಸಂಪೂರ್ಣವಾಗಿ ರೈತರ ಅಭಿವೃದ್ದಿಗಾಗಿ ಮತ್ತು ಕೃಷಿಯನ್ನು ಉದ್ಯಮವನ್ನಾಗಿ ಮಾರ್ಪಡಿಸಲು ರೂಪಿಸಿರುವ ವ್ಯವಸ್ಥೆಯಾಗಿದ್ದು, ಸರ್ಕಾರ ಯಾವುದೇ ಹಂತದಲ್ಲೂ ಹಸ್ತಕ್ಷೇಪ ಮಾಡುವುದಿಲ್ಲ. ತೋಟಗಾರಿಕೆ ಇಲಾಖೆಯ9 ರೈತ ಉತ್ಪಾದಕ ಸಂಸ್ಥೆಗಳು ಕಳೆದ ನಾಲ್ಕೈದು ವರ್ಷಗಳಿಂದ ಸುಮಾರು 100 ಕೋಟಿ ರೂ.ಗಳ ವಹಿವಾಟು ನಡೆಸಿವೆ.

ಎಫ್‍ಪಿಒಗಳ ಆರ್ಥಿಕ ಅಭಿವೃದ್ಧಿ ಹೆಚ್ಚಾದಂತೆಲ್ಲ ಆತಂತರಿಕ ರಾಜಕೀಯವೂ ತಲೆಎತ್ತಿದ್ದು, ಇದು ತಲೆನೋವಾಗಿ ಪರಿಣಮಿಸಿದೆ. ಎಫ್‍ಪಿಒಗಳು ಯಾವುದೇ ರಾಜಕೀಯ ಮತ್ತು ಭ್ರಷ್ಟಾಚಾರದ ಸೋಂಕಿಲ್ಲದೆ ವ್ಯವಸ್ಥಿತವಾಗಿ ನಡೆಸಿದ್ದೇ ಆದರೆ ಕೃಷಿ ಕ್ಷೇತ್ರವು ಕಾರ್ಪೊರೇಟ್ ಸಂಸ್ಥೆಯ ಮಾದರಿಯಲ್ಲೇ ಅಭಿವೃದ್ಧಿಯಾಗಿ ರೈತರ ಬದುಕು ಹಸನಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಆದರೆ ಎಫ್‍ಪಿಒಗಳ ಬಗ್ಗೆ ರೈತರಲ್ಲಿ ಇನ್ನು ಹೆಚ್ಚಿನ ಜಾಗೃತಿ ಮೂಡಿಲ್ಲ. ಈಗಿರುವ ಕಾನೂನುಗಳು ಹೆಚ್ಚು ಪರಿಣಾಮಕಾರಿಯಾಗಿಲ್ಲದಿರುವುದರಿಂದ ಕೃಷಿಯ ವ್ಯಾಪಾರ ವಹಿವಾಟು ಕುಂಟುತ್ತಾ ಸಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ