ಓಸಾಕಾ, ಜೂ.26- ಜಪಾನ್ನಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ ಜಿ-20 ಶೃಂಗಸಭೆ ಮೇಲೆ ಅಮೆರಿಕ ಮತ್ತು ಚೀನಾ ನಡುವಣ ವಾಣಿಜ್ಯ ಸಮರ ಮತ್ತು ಇರಾನ್ ಉದ್ವಿಗ್ನತೆಯ ಕರಾಳ ಛಾಯೆ ಆವರಿಸಿದೆ.
ಓಸಾಕಾ ನಗರಿಯಲ್ಲಿ ಜೂನ್ 28ರಿಂದ ಮಹತ್ವದ ಎರಡು ದಿನಗಳಿಂದ ಜಿ-20 ಶೃಂಗ ಸಭೆ ಆರಂಭವಾಗಲಿದ್ದು, ಇವುಗಳೇ ಪ್ರಧಾನ ಚರ್ಚೆಯ ವಿಷಯಗಳೂ ಅಗಿಲಿವೆ. ಜೊತೆಗೆ ಉತ್ತರ ಕೊರಿಯಾದ ಅಣ್ವಸ್ತ್ರ ವಿವಾದ, ವೆನಿಜುವೆಲಾದಲ್ಲಿ ಎದುರಾಗಿರುವ ಆರ್ಥಿಕ ಸಂಕಷ್ಟ ಮತ್ತು ವಿಶ್ವದ ಆರ್ಥಿಕತೆ ಕುಂಠಿತ-ಈ ಗಂಭೀರ ಸಮಸ್ಯೆಗಳೂ ಕೂಡ ಚರ್ಚೆಗೆ ಬರಲಿವೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಅಮೆರಿಕ ಮತ್ತು ಚೀನಾ ನಡುವೆ ಉಲ್ಬಣಗೊಂಡಿರುವ ವಾಣಿಜ್ಯ ಸಮರ, ಇರಾನ್ ಮತ್ತು ಅಮೆರಿಕ ನಡುವೆ ಪ್ರಕ್ಷುಬ್ಧಮಯ ವಾತಾವರಣದಿಂದ ಯುದ್ದದ ಆತಂಕ, ವಿವಿಧ ದೇಶಗಳಲ್ಲಿನ ಆರ್ಥಿಕ ಬಿಕ್ಕಟ್ಟು, ಅಣ್ವಸ್ತ್ರಗಳ ವಿಚಾರದಲ್ಲಿ ಉತ್ತರ ಕೊರಿಯಾದ ಹಠಮಾರಿತನ, ದೊಡ್ಡ ಪಿಡುಗಾಗಿಯೇ ಮುಂದುವರಿದ ಭಯೋತ್ಪಾದನೆ, ಜಾಗತಿಕ ಆರ್ಥಿಕ ಹಿಂಜರಿತ-ಇವೇ ಮೊದಲಾದ ವಿಷಯಗಳು ಜಿ-20 ಶೃಂಗಸಭೆಯಲ್ಲಿ ಮುಖ್ಯವಾಗಿ ಚರ್ಚೆಯಾಗಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆಸ್ಟ್ರೇಲಿಯಾ, ಕೆನಡಾ, ಸೌದಿ ಅರೇಬಿಯಾ, ಅಮೆರಿಕ, ಭಾರತ, ರಷ್ಯಾ, ದಕ್ಷಿಣಾ ಆಫ್ರಿಕಾ, ಟರ್ಕಿ, ಅರ್ಜೆಂಟೈನಾ, ಬ್ರೆಜಿಲ್, ಮೆಕ್ಸಿಕೋ, ಫ್ರಾನ್ಸ್, ಜರ್ಮನಿ, ಇಟಲಿ, ಇಂಗ್ಲೆಂಡ್, ಚೀನಾ, ಇಂಡೋನೆಷ್ಯಾ, ಜಪಾನ್ ಮತ್ತು ಉತ್ತರ ಕೊರಿಯಾ-ಇವು ಜಿ-20 ಸದಸ್ಯ ದೇಶಗಳಾಗಿವೆ. ಈ ಎಲ್ಲ ದೇಶಗಳ ಮುಖಂಡರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಮೋದಿ-ಟ್ರಂಪ್ ಚರ್ಚೆ : ಜಿ-20 ಶೃಂಗಸಭೆ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷರಾದ ಕ್ಸಿ ಜಿನ್ಪಿಂಗ್ ಸೇರಿದಂತೆ ವಿವಿಧ ದೇಶಗಳ ಮುಖಂಡರೊಂದಿಗೆ ಚರ್ಚೆ ನಡೆಸಲಿದ್ದಾರೆ.