ಶ್ರೀನಗರ, ಜೂ.26- ಕಣಿವೆ ರಾಜ್ಯಕ್ಕೆ ಗೃಹ ಸಚಿವ ಅಮಿತ್ ಶಾ ಭೇಟಿಗೆ ಮುನ್ನವೇ ಜಮ್ಮು ಮತ್ತು ಕಾಶ್ಮೀರ ಪುಲ್ಮಾಮಾ ಜಿಲ್ಲೆಯಲ್ಲಿ ತ್ರಾಲ್ ಅರಣ್ಯ ಪ್ರದೇಶದಲ್ಲಿ ಇಂದು ಬೆಳಗ್ಗೆ ನಡೆದ ಯೋಧರೊಂದಿಗೆ ನಡೆಸಿದ್ದ ಗುಂಡಿನ ಚಕಮಕಿಯಲ್ಲಿ ಉಗ್ರಗಾಮಿಯೊಬ್ಬ ಹತನಾಗಿದ್ದಾನೆ.
ತ್ರಾಲ್ ಪ್ರದೇಶದಲ್ಲಿ ಉಗ್ರರು ಅವಿತಿಟ್ಟುಕೊಂಡಿರುವ ಖಚಿತ ಸುಳಿವಿನ ಮೇರೆಗೆ ಯೋಧರು ಇಂದು ನಸುಕಿನಿಂದಲೇ ಆ ಪ್ರದೇಶವನ್ನು ಸುತ್ತುವರಿದು ತೀವ್ರ ಶೋಧ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಭಯೋತ್ಪಾದಕರು ಯೋಧರತ್ತ ಗುಂಡು ಹಾರಿಸಿದಾಗ ಎನ್‍ಕೌಂಟರ್ ನಡೆಯಿತು.
ಈ ಗುಂಡಿನ ಕಾಳಗದಲ್ಲಿ ಉಗ್ರನೊಬ್ಬ ಹತನಾಗಿದ್ದು, ಆತನ ಬಳಿಯಿಂದ ರೈಫಲ್ ಮತ್ತು ಬುಲೆಟ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗುಂಡಿನ ಚಕಮಕಿ ವೇಳೆ ಪರಾರಿಯಾಗಿರಬಹುದಾದ ಉಗ್ರರಿಗಾಗಿ ಶೋಧ ಮುಂದುವರಿದಿದೆ.
ಗೃಹ ಸಚಿವರಾಗಿ ಅಮಿತ್ ಶಾ ಅಧಿಕಾರ ವಹಿಸಿಕೊಂಡ ನಂತರ ಇಂದು ಪ್ರಥಮ ಬಾರಿಗೆ ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಅಲ್ಲಿನ ಭಧ್ರತಾ ಸ್ಥಿತಿಗಳನ್ನು ಅವರು ಪರಾಮರ್ಶಿಸಿ, ಉನ್ನತ ಸೇನಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವರು.