ಬ್ಯಾಂಕ್ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ-ಸ್ಟರ್ಲಿಂಗ್ ಬಯೋಟೆಕ್ ಸಂಸ್ಥೆಗೆ ಸೇರಿದ 9778 ಕೋಟಿ ರೂ. ಆಸ್ತಿ ಜಪ್ತಿ

ನವದೆಹಲಿ, ಜೂ.26-ಕೋಟ್ಯಂತರ ರೂ.ಗಳ ಬ್ಯಾಂಕ್ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಾಮೀಲಾಗಿರುವ ಗುಜರಾತ್ ಮೂಲದ ಸ್ಟರ್ಲಿಂಗ್ ಬಯೋಟೆಕ್ ಸಂಸ್ಥೆಗೆ ಸೇರಿದ 9,778 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ(ಇಡಿ) ಜಪ್ತಿ ಮಾಡಿದೆ.

ಭಾರೀ ವಂಚನೆ ಮತ್ತು ಅಕ್ರಮ ವವಾಟು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ ಇಡಿ ಅಧಿಕಾರಿಗಳು ಗುಜರಾತ್, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿರುವ ಸ್ಟರ್ಲಿಂಗ್ ಬಯೋಟೆಕ್ ಸಂಸ್ಥೆಯ ಕಚೇರಿಗಳು ಮತ್ತು ನಿರ್ದೇಶಕರು ಮನೆಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡು ಭಾರೀ ಮೌಲ್ಯದ ಆಸ್ತಿ-ಪಾಸ್ತಿಗಳನ್ನು ವಶಪಡಿಸಿಕೊಂಡರು.

ಸ್ಟರ್ಲಿಂಗ್ ಬಯೋಟೆಕ್ ಸಂಸ್ಥೆಗೆ ಸೇರಿದ ಒಟ್ಟು 9,778 ಕೋಟಿ ರೂ.ಗಳ ಆಸ್ತಿ-ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇಡಿ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.

ಗುಜರಾತ್, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ ನಗರಗಳಲ್ಲಿ ಸ್ಟರ್ಲಿಂಗ್ ಬಯೋಟೆಕ್ ಕಚೇರಿಗಳನ್ನು ಹೊಂದಿದೆ. ಬ್ಯಾಂಕ್‍ಗಳಿಂದ ಕೋಟ್ಯಂತರ ರೂ.ಗಳ ಸಾಲ ಪಡೆದು ವಂಚಿಸಿರುವುದಲ್ಲದೇ, 8,100 ಕೋಟಿ ರೂ. ಮೌಲ್ಯದ ಅಕ್ರಮ ಹಣ ವಹಿವಾಟು ನಡೆಸಿದೆ.

ಬೇನಾಮಿ ಕಂಪನಿಗಳ ಹೆಸರಿನಲ್ಲಿ ಕೋಟ್ಯಂತರ ರೂ.ಗಳ ಸಾಲ ಪಡೆದು ಅದನ್ನು ದೇಶಗಳಲ್ಲಿನ ತನ್ನ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿದೆ.

ಈ ಸಂಸ್ಥೆಯ ಮುಖಸ್ಥ ನಿತಿನ್ ಸಂದೇಸರ ಮತ್ತು ಕಂಪನಿಯ ನಿರ್ದೇಶಕರಾಗಿರುವ ಅವರ ಕುಟುಂಬದ ಸದಸ್ಯರು ದೇಶಗಳಲ್ಲಿ ತಲೆ ಮರೆಸಿಕೊಂಡಿದ್ದಾರೆ.

ಅವರನ್ನು ಭಾರತಕ್ಕೆ ಕರೆತರುವ ಯತ್ನವನ್ನು ಇಡಿ ಚುರುಕುಗೊಳಿಸಿದ್ದು, ಅದಕ್ಕೆ ಪೂರಕವಾದ ದಾಖಲೆಪತ್ರಗಳನ್ನು ಸಿದ್ದಪಡಿಸುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ