ರೌಡಿಗಳ ಪರೇಡ್ ನಡೆಸಿದ ಡಿಸಿಪಿ ಡಾ.ರೋಹಿಣಿ ಕಟೋಚ್ ಸಫಟ್

ಬೆಂಗಳೂರು, ಜೂ.26-ದಕ್ಷಿಣ ವಿಭಾಗದ ಸುಬ್ರಹ್ಮಣ್ಯಪುರ ಉಪವಿಭಾಗದಲ್ಲಿ ಡಿಸಿಪಿ ಡಾ.ರೋಹಿಣಿ ಕಟೋಚ್ ಸಫಟ್ ಅವರು ನಿನ್ನೆ ಸಂಜೆ ರೌಡಿ ಪರೇಡ್ ನಡೆಸಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದರೆ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಜರಗನಹಳ್ಳಿ ಶಾಲೆ ಆವರಣದಲ್ಲಿ ಉಪವಿಭಾಗದಿಂದ 206 ರೌಡಿಗಳ ಪರೇಡ್ ನಡೆಸಿದ ಡಿಸಿಪಿ ಅವರು ಯಾವುದೇ ರೀತಿಯ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು, ಎದುರಾಳಿ ಗುಂಪಿನ ಜತೆ ವೈಷಮ್ಯ ಬೆಳೆಸಿಕೊಳ್ಳಬಾರದು ಎಂದು ರೌಡಿಗಳಿಗೆ ತಿಳಿಸಿದರು.

ಕೊಲೆ, ಕೊಲೆಯತ್ನ, ದರೋಡೆ, ಸುಲಿಗೆ ಇನ್ನಿತರ ಪ್ರಕರಣಗಳಲ್ಲಿ ಭಾಗಿಯಾಗಿರುವ ಹಾಗೂ ಜೈಲಿನಿಂದ ಇತ್ತೀಚೆಗೆ ಹೊರಬಂದಿರುವ ರೌಡಿಗಳನ್ನು ಪರೇಡ್‍ಗೆ ಕರೆತರಲಾಗಿತ್ತು.

ಅಪರಾಧ ವಿಭಾಗದ ಸಿಬ್ಬಂದಿಗಳು ನಿಮ್ಮ ಚಲನ-ವಲನ ಗಮನಿಸುತ್ತಿರುತ್ತಾರೆ.ನೀವೇನಾದರೂ ಬಾಲ ಬಿಚ್ಚಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ನೀವು ಪ್ರಸ್ತುತ ಮಾಡುತ್ತಿರುವ ಉದ್ಯೋಗ, ಮೊಬೈಲ್ ಸಂಖ್ಯೆ, ವಾಸಸ್ಥಳ, ಆದಾಯದ ಮಾಹಿತಿಗಳನ್ನು ನೀಡುವಂತೆ ಹೇಳಿದರು.

ಇದೇ ವೇಳೆ ಸ್ಥಳದಲ್ಲಿದ್ದ ಅಪರಾಧ ವಿಭಾಗದ ಸಿಬ್ಬಂದಿಗಳಿಗೂ ಸೂಚನೆ ನೀಡಿ, ಈ ರೌಡಿಗಳ ಚಲನ-ವಲನಗಳ ಬಗ್ಗೆ ನಿಗಾ ಇಡುವಂತೆ ಸೂಚಿಸಿದ್ದಾರೆ.

ಸುಬ್ರಹ್ಮಣ್ಯಪುರ ಉಪವಿಭಾಗದ ಎಸಿಪಿ ಮಹದೇವ್ ಹಾಗೂ ಉಪವಿಭಾಗದ ಎಲ್ಲ ಠಾಣೆಗಳ ಇನ್ಸ್‍ಪೆಕ್ಟರ್‍ಗಳು ಈ ಸಂದರ್ಭದಲ್ಲಿ ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ