ಸೋಲಿನ ಹತಾಶೆಯಿಂದ ತಾರತಮ್ಯದ ರಾಜಕಾರಣ ಮಾಡುತ್ತಿರುವ ಸಿಎಂ-ಶಾಸಕ ಸಿ.ಟಿ.ರವಿ

ಬೆಂಗಳೂರು, ಜೂ.26- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆ ಸೋಲಿನ ಹತಾಶೆಯಿಂದ ತಾರತಮ್ಯದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎರಡು-ಮೂರು ಜಿಲ್ಲೆಗೆ ಮಾತ್ರ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಲ್ಲ. ಅವರು ಇಡೀ ರಾಜ್ಯಕ್ಕೇ ಮುಖ್ಯಮಂತ್ರಿ ಎಂಬುದನ್ನು ಅರಿತು ಕೆಲಸ ನಿರ್ವಹಿಸಬೇಕಿದೆ ಎಂದರು.

ರಾಯಚೂರಿನಲ್ಲಿ ಗ್ರಾಮ ವಾಸ್ತವ್ಯದ ನಿಮಿತ್ತ ತೆರಳಿರುವ ಮುಖ್ಯಮಂತ್ರಿಗಳಿಗೆ ಯರಮರಸ್ ನೌಕರರು ತಮ್ಮನ್ನು ಖಾಯಂಗೊಳಿಸುವಂತೆ ಮನವಿ ನೀಡಲು ಬಂದಾಗ ನೀವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೋಟ್ ಹಾಕುತ್ತೀರಿ ಎಂದು ಹೇಳಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಶಾಸಕ ಶಿವನಗೌಡ ನಾಯಕ್ ಪಾದಯಾತ್ರೆ ಬಗ್ಗೆಯೂ ಏಕವಚನದಲ್ಲಿ ಮಾತನಾಡಿದ್ದಾರೆ. ನೌಕರರು ಇವರ ಕುಟುಂಬ ಮತ್ತು ಪಕ್ಷದಿಂದ ಸಹಾಯ ಬೇಡಲು ಬಂದಿರಲಿಲ್ಲ. ಬದಲಿಗೆ ಸರ್ಕಾರದಿಂದ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಲು ಬಂದಿದ್ದರು ಎಂದರು.

ಮುಖ್ಯಮಂತ್ರಿಗಳು ಸೋಲಿನ ಹತಾಶೆಯಿಂದ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಇದರಿಂದ ರಾಜ್ಯದ ಆರೋಗ್ಯ ಮತ್ತು ವ್ಯಕ್ತಿಗತವಾಗಿ ಅವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ದೇವೇಗೌಡರು ಸೂಕ್ತ ಸಲಹೆ ನೀಡಲಿ ಎಂದು ಹೇಳಿದರು.

ಮುಖ್ಯಮಂತ್ರಿಗಳ ಸ್ಥಾನ ನಿಭಾಯಿಸಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಡುವುದು ಸೂಕ್ತ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ