ರಸ್ತೆ ತಡೆ ನಡೆಸಿ ಅಡ್ಡಿಪಡಿಸಿದವರನ್ನು ರೇಗದೇ ಮುದ್ದು ಮಾಡಲು ಸಾಧ್ಯವೆ-ಸಿಎಂ ಕುಮಾರಸ್ವಾಮಿ

ರಾಯಚೂರು, ಜೂ.26-ವೈಟಿಪಿಎಸ್ ಕಾರ್ಮಿಕರ ಸಮಸ್ಯೆ ಕುರಿತು ಬೆಳಗ್ಗೆಯಷ್ಟೆ ಕಾರ್ಮಿಕರ ಮುಖಂಡರ ಜೊತೆ ಮಾತುಕತೆ ನಡೆಸಿ 15 ದಿನ ಕಾಲಾವಕಾಶ ಕೇಳಿದ್ದೆ.

ಅದರ ನಂತರವೂ ರಸ್ತೆ ತಡೆ ನಡೆಸಿ ಕೆಲಸ ಮಾಡಲು ಅಡ್ಡಿ ಪಡಿಸಿದರೆ ಅಂತಹವರ ಮೇಲೆ ರೇಗದೆ ಮುದ್ದು ಮಾಡಲು ಸಾಧ್ಯವೇ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಕರೇಗುಡ್ಡ ಗ್ರಾಮವಾಸ್ತವ್ಯಕ್ಕೆ ತೆರಳುತ್ತಿದ್ದ ಮುಖ್ಯಮಂತ್ರಿಯವರಿದ್ದ ಬಸ್ಸನ್ನು ವೈಟಿಪಿಎಸ್ ಕಾರ್ಮಿಕರು ತಡೆದು ಪ್ರತಿಭಟನೆ ನಡೆಸಿದರು. ಆ ಸಂದರ್ಭದಲ್ಲಿ ಸಿಟ್ಟಾದ ಕುಮಾರಸ್ವಾಮಿ ಅವರು, ಮೋದಿಗೆ ವೋಟ್ ಹಾಕ್ತೀರಾ, ಕೆಲಸ ಮಾಡಲು ನನ್ನನ್ನು ಕೇಳ್ತೀರಾ. ನಿಮಗೆ ಮರ್ಯಾದೇ ಬೇರೆ ಕೊಡ್ಬೇಕಾ, ಲಾಠಿ ಚಾರ್ಜ್ ಮಾಡಿಸ್ಬೇಕಾ ಎಂದು ಕಿಡಿಕಾರಿದರು. ಇದನ್ನು ರಾಜಕೀಯಗೊಳಿಸಿದ ಬಿಜೆಪಿ ಪ್ರತಿಭಟನೆ ಮುಂದಾಗಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿಯವರು, ಇಂದು ಬೆಳಗ್ಗೆಯಷ್ಟೆ ರಾಯಚೂರಿನ ಪ್ರವಾಸಿ ಮಂದಿರದಲ್ಲಿ ವೈಟಿಪಿಎಸ್‍ನ ಕಾರ್ಮಿಕ ಮುಖಂಡರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ಕೊಟ್ಟಿದ್ದೆ. ಇದು ನನ್ನ ಆಡಳಿತಾವಧಿಯಲ್ಲಿನ ನಿರ್ಧಾರದಿಂದ ಆದ ಸಮಸ್ಯೆಯಲ್ಲ. ಆದರೂ ಸಮಸ್ಯೆಗೆ ಪರಿಹಾರ ಹುಡುಕುವುದಾಗಿ ಸಮಾಧಾನ ಹೇಳಿ ಕಳುಹಿಸಿದ್ದೇನೆ. ಅಲ್ಲಿಂದ ಬಂದವರು ನಮ್ಮ ಬಸ್‍ನ ಮುಂದೆ ಕುಳಿತು ಅಡ್ಡ ಹಾಕಿದ್ದಾರೆ. ಅವರಿಗೆ ಸಮಸ್ಯೆ ಬಗೆಹರಿಯಬೇಕೋ, ಪ್ರಚಾರ ಬೇಕೋ ಎಂಬ ಪ್ರಶ್ನೆ ಕಾಡಿದೆ. ಪೊಲೀಸರು ತಾಳ್ಮೆಯಿಂದಲೇ ಅವರನ್ನು ಪಕ್ಕಕ್ಕೆ ಕಳುಹಿಸುವ ಪ್ರಯತ್ನ ನಡೆಸಿದರು. ಆದರೂ ಪ್ರತಿಭಟನಾಕಾರರು ಸಹಕರಿಸದಿದ್ದಾಗ ನಾನು ರೇಗಬೇಕಾಯಿತು.

ರಸ್ತೆಯಲ್ಲಿ ನಿಂತು ಸರ್ಕಾರಿ ಆದೇಶ ಮಾಡಲಾಗುವುದಿಲ್ಲ. ಸಮಾಧಾನ ಹೇಳಿದ ನಂತರವೂ ಸುಮಾರು 50 ರಿಂದ 60 ಮಂದಿಯ ಗುಂಪು ಪ್ರಚಾರಕ್ಕೆ ಈ ರೀತಿಯ ಪ್ರತಿಭಟನೆ ನಡೆಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿಗೆ ಜನ ವೋಟ್ ಹಾಕಿದ್ದಾರೆ, ನಾನು ಅದನ್ನೇ ಹೇಳಿದ್ದೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೋಗುವ ದಾರಿಯಲ್ಲಿ ಈ ರೀತಿ ಅಡ್ಡ ಹಾಕಿದ್ದರೆ ಅಧಿಕಾರಿಗಳು ಸುಮ್ಮನಿರುತ್ತಿದ್ದೀರಾ… ಲಾಠಿ ಚಾರ್ಜ್ ಮಾಡಿ ಕಳುಹಿಸುತ್ತಿರಲಿಲ್ಲವೇ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.

ನಾನು ಸಾಮಾನ್ಯವಾಗಿ ತಾಳ್ಮೆ ಕಳೆದುಕೊಳ್ಳುವವನಲ್ಲ. ಎಲ್ಲರೊಂದಿಗೂ ಪ್ರೀತಿಯಿಂದಲೇ ಮಾತುಕತೆ ನಡೆಸುತ್ತೇನೆ. ಜನಸ್ಪಂದನಾ ಕಾರ್ಯಕ್ರಮದಲ್ಲಿ ನನಗೆ ಅರ್ಜಿ ಕೊಡಲು ಸಾವಿರಾರು ಕಾಯುತ್ತಾ ಕುಳಿತಿದ್ದಾರೆ. ಇಲ್ಲಿ ಇವರು ಅರ್ಧ ಗಂಟೆ ನನ್ನ ಬಸ್ಸನ್ನು ತಡೆದರೆ ಅಲ್ಲಿ ಕಾಯುತ್ತಿರುವವರ ಗತಿ ಏನು? ಆ ಕಾರಣಕ್ಕಾಗಿಯೇ ನಾನು ಅವರ ಮೇಲೆ ರೇಗಿದ್ದೇನೆ ಎಂದು ಹೇಳಿದ್ದಾರೆ.

ಬಿಜೆಪಿಯವರು ಒತ್ತಾಯಿಸಿದಂತೆ ನಾನು ಯಾವ ಮಾತುಗಳನ್ನು ವಾಪಸ್ ಪಡೆಯುವುದಿಲ್ಲ. ವಾಪಸ್ ಪಡೆಯುವಂತಹ ಪದ ಬಳಕೆಯನ್ನೂ ನಾನು ಮಾಡಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ