ರಾಯಚೂರು,ಜೂ.26- ಗ್ರಾಮವಾಸ್ತವ್ಯಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿನಾಕಾರಣ ಟೀಕೆ ಮತ್ತು ಆರೋಪ ಮಾಡುತ್ತಿದ್ದು, ಇದಕ್ಕೆ ವಿಧಾನಸಭೆ ಅಧಿವೇಶನದಲ್ಲಿ ಸೂಕ್ತ ಉತ್ತರ ನೀಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.
ಗ್ರಾಮವಾಸ್ತವ್ಯ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಬಗ್ಗೆ ಬಿಜೆಪಿ ಮಾಡುತ್ತಿರುವ , ಟೀಕೆಗಳ ಬಗ್ಗೆ ಅಧಿವೇಶನದಲ್ಲಿ ಸುದೀರ್ಘವಾಗಿ ಚರ್ಚೆ ಮಾಡಲಾಗುವುದು ಎಂದು ಹೇಳಿದರು.
ರಾಯಚೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಯಾವ ಯಾವ ಕೆಲಸಗಳಿಗೆ ಆದ್ಯತೆ ನೀಡಬೇಕೆಂಬ ಮಾಹಿತಿಯನ್ನು ಸಚಿವರು ಶಾಸಕರು, ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡ ನಂತರ ಮುಖ್ಯಮಂತ್ರಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಗ್ರಾಮವಾಸ್ತವ್ಯ ಕಾರ್ಯಕ್ರಮ ಮೈತ್ರಿ ಸರ್ಕಾರದ್ದೇ ಹೊರತು ಯಾವುದೇ ಪಕ್ಷಕ್ಕೆ ಸಂಬಂಧಿಸಿದ್ದಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮೈತ್ರಿ ಸರ್ಕಾರ ಬಿಜೆಪಿಯವರು ಆರೋಪಿಸಿದಂತೆ ಕೇವಲ ಎರಡು ಜಿಲ್ಲೆಗೆ ಸೀಮಿತವಾಗಿಲ್ಲ. ಇಡೀ ರಾಜ್ಯವನ್ನು ಒಂದೇ ದೃಷ್ಟಿಯಿಂದ ನೋಡುತ್ತಿದ್ದು, ಸಮಗ್ರ ಅಭಿವೃದ್ದಿಗೆ ಗಮನಹರಿಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ನೀರಾವರಿ ಯೋಜನೆಗೆ 500 ಕೋಟಿ ರೂ.ನೀಡಲಾಗಿದೆ ಎಂದು ಬಿಜೆಪಿ ನಾಯಕರ ವಿರುದ್ಧ ಮುಖ್ಯಮಂತ್ರಿ ವಾಗ್ದಾಳಿ ನಡೆಸಿದರು.
ಶಾಸಕ ಶಿವನಗೌಡ ನಾಯಕ್ ಪಾದಯಾತ್ರೆ ಮಾಡುವ ಮೂಲಕ ಜನರ ದಂಡು ಕರೆದುಕೊಂಡು ಯುದ್ಧ ಮಾಡುವ ರೀತಿ ಹೊರಟಿದ್ದಾರೆ. ಇಂಥದ್ದನ್ನೆಲ್ಲ ನೋಡಿದ್ದೇವೆ. ಯಾವ ಪುರಾಷರ್ಥಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಏಕೆ ಅವರ ಕ್ಷೇತ್ರದ ಅಭಿವೃದ್ದಿ ಮಾಡಿಸಿಕೊಳ್ಳಲಿಲ್ಲ ಎಂದು ತಿರುಗೇಟು ನೀಡಿದರು.
ಬಿಜೆಪಿಯವರ ಹೆಸರು ಹೇಳಿಕೊಂಡು ಕೆಲಸ ಮಾಡುವ ಅಗತ್ಯ ನನಗಿಲ್ಲ. ಇದಕ್ಕೂ ಮುಂಚೆ ಅವರದೇ ಸರ್ಕಾರವಿದ್ದಾಗ ಏನು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.
ದೇವದುರ್ಗ ತಾಲ್ಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ್ದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು. ಈಗ ಆರೋಪ ಮಾಡುತ್ತಿರುವ ವ್ಯಕ್ತಿ ಆಗ ಹುಟ್ಟಿದ್ದರೋ ಇಲ್ಲವೋ ಗೊತ್ತಿಲ್ಲ. ರಾಯಚೂರು ಜಿಲ್ಲೆಗೆ 182 ಕೋಟಿ ರೂ. ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಬಿಡುಗಡೆ ಮಾಡಲಾಗಿದೆ. ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು ಅನುಷ್ಠಾನಗೊಂಡು ಜನರ ಗಮನಕ್ಕೆ ಬರಲು ಇನ್ನು ನಾಲ್ಕು ತಿಂಗಳು ಬೇಕಾಗಿದೆ.ಆರೋಪ ಮಾಡುವವರು ಸುಖಾಸುಮ್ಮನೆ ಮಾಡಬಾರದು.
ರಾಜ್ಯದ ಅಭಿವೃದ್ದಿ ವಿಚಾರದಲ್ಲಿ ಮೈತ್ರಿ ಸರ್ಕಾರ ಹಿಂಜರಿಯುವ ಪ್ರಶ್ನೆಯೇ ಇಲ್ಲ ಎಂದ ಅವರು, ಅಭಿವೃದ್ದಿಗೆ ಹಣದ ಕೊರತೆಯೂ ಇಲ್ಲ ಎಂದರು.
ರೈತರ ಸಾಲಮನ್ನಾ ಮಾಡಲು ವಿವಿಧ ಇಲಾಖೆಗಳಿಗೆ ಹಣ ಕಡಿತ ಮಾಡಲಾಗಿದೆ ಎಂಬ ಆರೋಪ ಸುಳ್ಳು. ಸಣ್ಣ ಮತ್ತು ಬೃಹತ್ ನೀರಾವರಿ ಯೋಜನೆಗೆ ಈ ವರ್ಷ 19 ಸಾವಿರ ಕೋಟಿ ರೂ.ಒದಗಿಸಲಾಗಿದೆ. ರಾಜ್ಯದ ಆರೂವರೆ ಕೋಟಿ ಜನರು ನನ್ನ ಅಣ್ಣತಮ್ಮಂದಿರು, ಅಕ್ಕತಂಗಿಯರು ಇದ್ದಾರೆ ಎಂದರು.
ರಾಯಚೂರಿಗೆ 3000 ಕೋಟಿ:
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ 3000 ಕೋಟಿ ರೂ. ವೆಚ್ಚದ ಕಾರ್ಯಕ್ರಮಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಸಚಿವ ಸಂಪುಟ ಸಭೆಯಲ್ಲಿ ರಾಯಚೂರು ವಿಶ್ವವಿದ್ಯಾಲಯದ ಕುರಿತು ಸುಗ್ರೀವಾಜ್ಞೆ ತರಲು ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ರಾಜ್ಯಪಾಲರು ವಿವರಣೆಯನ್ನು ಕೇಳಿದ್ದಾರೆ. ಅವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಸರ್ಕಾರ ಮಾಡಿಕೊಡಲಿದೆ ಎಂದು ಹೇಳಿದರು.
ಸಮಾನಾಂತರ ಜಲಾಶಯ: ಐಐಟಿಗೆ ಭೂಮಿ ನೀಡುವುದು ಸೇರಿದಂತೆ ವಿವಿಧ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು. ತುಂಗಭದ್ರ ಜಲಾಶಯದಲ್ಲಿ 39 ಟಿಎಂಸಿ ಅಡಿಯಷ್ಟು ಹೂಳು ತುಂಬಿಕೊಂಡಿದೆ. ಅಷ್ಟು ಪ್ರಮಾಣದ ಹೂಳು ತೆಗೆಯುವುದು ಅಸಾಧ್ಯವೆಂಬ ವರದಿಯ ಹಿನ್ನೆಲೆಯಲ್ಲಿ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಿಪಿಎಆರ್ (ವಿಸ್ತೃತ ಯೋಜನಾ ವರದಿ)ರೂಪಿಸುವಂತೆ ಸೂಚಿಸಲಾಗಿದೆ. ವಿವಿಧ ಇಲಾಖೆಗಳ 61 ಯೋಜನೆಗಳ ಜಾರಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಳ್ಳಲಾಗಿದ್ದು, ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು. ಶಾಶ್ವತ ಕುಡಿಯುವ ನೀರಿನ ಯೋಜನೆ ರಾಜ್ಯಾದ್ಯಂತ ಆಗಬೇಕೆಂಬುದು ನಮ್ಮ ಬಯಕೆ ಎಂದರು.
ಈ ಸಂದರ್ಭದಲ್ಲಿ ಸಚಿವರಾದ ಸಾ.ರಾ.ಮಹೇಶ್, ವೆಂಕಟರಾವ್ ನಾಡಗೌಡ ಸೇರಿದಂತೆ ಜಿಲ್ಲೆಯ ಶಾಸಕರು, ವಿವಿಧ ಇಲಾಖೆಗಳ ಶಾಸಕರು ಉಪಸ್ಥಿತರಿದ್ದರು.