ಮಾಜಿ ಸಿಎಂ ಮೊಯ್ಲಿ ಮತ್ತು ಶಾಸಕ ಡಾ.ಕೆ.ಸುಧಾಕರ್ ನಡುವೆ ಮಾತಿನ ಚಕಮಕಿ

ಬೆಂಗಳೂರು, ಜೂ.26- ಲೋಕಸಭೆ ಚುನಾವಣೆ ಸೋಲಿಗೆ ಸಂಬಂಧಪಟ್ಟಂತೆ ಕೇಂದ್ರದ ಮಾಜಿ ಸಚಿವ ವೀರಪ್ಪಮೊಯ್ಲಿ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಮತ್ತು ಶಾಸಕ ಡಾ.ಕೆ.ಸುಧಾಕರ್ ನಡುವೆ ಮಾತಿನ ಚಕಮಕಿ ನಡೆದಿದೆ.

ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಚರ್ಚೆ ನಡೆಸಲು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಜನಪ್ರತಿನಿಧಿಗಳ ಸಭೆ ಕರೆದಿದ್ದರು. ಸಭೆಯಲ್ಲಿ ಮೊಯ್ಲಿ ಮತ್ತು ಡಾ.ಸುಧಾಕರ್ ಪರಸ್ಪರ ವಾಗ್ವಾದ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಒಂದು ವರ್ಷದಿಂದ ಸುಧಾಕರ್ ಮಾಡಿದ ಎಡವಟ್ಟಿನಿಂದ ನಾನು ಸೋಲಬೇಕಾಯಿತು. ಒಂದು ಸಮುದಾಯವನ್ನು ನನ್ನ ವಿರುದ್ಧ ಎತ್ತಿ ಕಟ್ಟಲಾಗಿದೆ. ಅನಗತ್ಯವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಮಾತನಾಡುವ ಭರದಲ್ಲಿ ಸುಧಾಕರ್ ಚುನಾವಣೆಯಲ್ಲಿ ನನ್ನ ವಿರುದ್ಧ ಒಕ್ಕಲಿಗ ಸಮುದಾಯವನ್ನು ಎತ್ತಿ ಕಟ್ಟಿದ್ದಾರೆ ಎಂದು ಮೊಯ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನಗೆ ನೋವಾದಾಗ ಮಾತನಾಡಿದ್ದೇನೆ. ನನ್ನ ಹೇಳಿಕೆಗಳಿಗೂ ನಿಮ್ಮ ಸೋಲಿಗೂ ಸಂಬಂಧವಿಲ್ಲ. ನೀವು ಕ್ಷೇತ್ರದ ಜನರ ಜತೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಮನೆ ಬಾಗಿಲಿಗೆ ಬಂದ ಮತದಾರರನ್ನು ಗೌರವಿಸುತ್ತಿಲ್ಲ. ಇದರಿಂದ ಜನ ಸಿಟ್ಟಾಗಿದ್ದಾರೆ. ಜಿಲ್ಲೆಯಲ್ಲಿ ನಿಮಗೆ ಘೇರಾವ್ ಕೂಡ ಹಾಕಿದ್ದರು. ಆಗಲಾದರೂ ಎಚ್ಚೆತ್ತುಕೊಂಡಿದ್ದರೆ ನೀವು ಸೋಲುತ್ತಿರಲಿಲ್ಲ. ನಿಮ್ಮ ತಪ್ಪುಗಳಿಗೆ ನನ್ನನ್ನು ದೂಷಣೆ ಮಾಡಬೇಡಿ ಎಂದು ತಿರುಗೇಟು ನೀಡಿದ್ದಾರೆ.

ಇದರಿಂದ ಸಿಟ್ಟಾದ ಮೊಯ್ಲಿ ಅವರು ನಾನು ಅಧಿಕಾರಕ್ಕಾಗಿ ಬ್ಲಾಕ್‍ಮೇಲ್ ರಾಜಕಾರಣ ಮಾಡುವುದಿಲ್ಲ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ರಾಜಕಾರಣ ಮಾಡಿದವನು.ಬೇರೆಯವರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಮೊಯ್ಲಿ ತಿರುಗೇಟು ನೀಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಧ್ಯ ಪ್ರವೇಶಿಸಿ ಆಗಿದ್ದೆಲ್ಲ ಆಗಿ ಹೋಗಿದೆ. ಈಗ ಆ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ. ಮನಸ್ತಾಪವಾಗುವಂತಹ ಚರ್ಚೆಗಳು ಬೇಡ. ಮುಂದಿನ ದಿನಗಳಲ್ಲಾದರೂ ಎಲ್ಲರೂ ಹೊಂದಿಕೊಂಡು ಪಕ್ಷ ಸಂಘಟನೆ ಮಾಡೋಣ ಎಂದು ಸಲಹೆ ನೀಡುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ