ಬೆಂಗಳೂರು, ಜೂ.25- ವಿಧಾನಸೌಧದಲ್ಲಿ ನಿನ್ನೆ ನಡೆದ ಆತ್ಮಹತ್ಯೆ ಯತ್ನ ಪ್ರಕರಣದ ಹಿನ್ನೆಲೆಯಲ್ಲಿ ಶಕ್ತಿಕೇಂದ್ರಗಳಾದ ವಿಧಾನಸೌಧ ಮತ್ತು ವಿಕಾಸಸೌಧಗಳ ಭದ್ರತೆ ಹೆಚ್ಚಿಸಲಾಗಿದೆ.
ಎಲ್ಲ ಪ್ರವೇಶ ದ್ವಾರಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗುತ್ತಿದ್ದು, ತಪಾಸಣೆಗೆ ಒಳಪಡಿಸಿ ಗುರುತಿನ ಪತ್ರ ಪರಿಶೀಲಿಸಿ ಒಳಗೆ ಬಿಡಲಾಗುತ್ತದೆ.
ನಿನ್ನೆ ವಿಧಾನಸೌಧದ 3ನೆ ಮಹಡಿಯ 332ನೆ ಕೊಠಡಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ಹನೂರು ಗ್ರಾಮ ಪಂಚಾಯ್ತಿ ಗ್ರಂಥಾಲಯದ ಮೇಲ್ವಿಚಾರಕ ಆರ್.ರೇವಣ್ಣಕುಮಾರ್ (48) ಕತ್ತು ಹಾಗೂ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.
ತೀವ್ರವಾಗಿ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈತ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಗ್ರಂಥಾಲಯ ಸಿಬ್ಬಂದಿಗೆ ಕನಿಷ್ಠ ವೇತನ ನೀಡುವಂತೆ ಮನವಿ ಸಲ್ಲಿಸಲು ವಿಧಾನಸೌಧಕ್ಕೆ ತೆರಳಿದ್ದ.
ಈ ಪ್ರಕರಣ ನಡೆದ ನಂತರ ವಿಧಾನಸೌಧ ಮತ್ತು ವಿಕಾಸಸೌಧ ಪ್ರವೇಶಕ್ಕೆ ಭದ್ರತೆ ಹೆಚ್ಚಿಸಲಾಗಿದೆ.