ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸಮಾಜ ಸೇವೆಯಲ್ಲಿ ಪಾಲ್ಗೊಳ್ಳಬೇಕು-ರಾಜ್ಯಪಾಲ ವಜುಭಾಯ್ ವಾಲ

ಬೆಂಗಳೂರು, ಜೂ.25-ಬಡವರು, ನೊಂದವರು ಹಾಗೂ ರೋಗಿಗಳ ಸೇವೆಯಲ್ಲಿ ತೊಡಗಿಕೊಳ್ಳುವ ಮೂಲಕ ಸಮಾಜ ಸೇವೆಯಲ್ಲಿ ಪಾಲ್ಗೊಳ್ಳುವಂತೆ ಭಾರತ್‍ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ರಾಜ್ಯಪಾಲ ವಜುಭಾಯ್‍ವಾಲ ಕರೆ ನೀಡಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಕರ್ನಾಟಕ ಘಟಕ ರಾಜಭವನದ ಗಾಜಿನ ಮನೆಯಲ್ಲಿ ಹಮ್ಮಿಕೊಂಡಿದ್ದ ಕಬ್ಸ್ ಬುಲ್‍ಬುಲ್ ಸ್ಕೌಟ್ಸ್ ಗೈಡ್ಸ್ ರೋವರ್ಸ್ ಮತ್ತು ರೇಂಜರ್‍ಗಳಿಗೆ ಚತುರ್ಥ ಚರಣ್ ಹೀರಕ್‍ಪಂಕ್ ಹಾಗೂ ರಾಜ್ಯಪುರಸ್ಕಾರ ಪ್ರಮಾಣ ಪತ್ರಗಳ ಪ್ರದಾನ ಮಾಡಿ ಅವರು ಮಾತನಾಡಿದರು.

ಯುವ ಸಮುದಾಯ ಕೆಟ್ಟ ವಿಚಾರಗಳ ಕಡೆ ಗಮನ ಹರಿಸದೆ ಸಮಾಜಮುಖಿ ಸೇವೆಗಳ ಕಡೆಗೆ ಒಲವು ರೂಢಿಸಿಕೊಳ್ಳಬೇಕು. ಸಮಾಜದ ದೈನಂದಿನ ಆಗುಹೋಗುಗಳ ಕಡೆಗೆ ಹೆಚ್ಚಿನ ಗಮನ ಹರಿಸುವುದು ಸೂಕ್ತ. ರಾಜ್ಯ, ರಾಷ್ಟ್ರ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸೇವೆ ಸಲ್ಲಿಸುವಂತಹ ಮನೋಭಾವವನ್ನು ರೂಢಿಸಿಕೊಳ್ಳಿ ಎಂದು ಸಲಹೆ ಮಾಡಿದರು.

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಾಖೆಗೆ ಒದಗಿಸಿಕೊಡುವ ಭರವಸೆ ನೀಡಿದರು.

ಶಿಕ್ಷಣದ ಜತೆಗೆ ಸ್ಕೌಟ್ಸ್ ಮತ್ತು ಗೈಡ್ಸ್‍ನಿಂದ ವಿದ್ಯಾರ್ಥಿಯ ಸಮತೋಲನ ಬೆಳವಣಿಗೆಗೆ ಸಹಕಾರಿಯಾಗಲಿದೆ. ಆರೋಗ್ಯ, ಪರಿಸರ, ನಡತೆ ಹಾಗೂ ಸೇವಾ ಮನೋಭಾವನೆಗಳನ್ನು ಮಕ್ಕಳಿಗೆ ಸ್ಕೌಟ್ಸ್‍ನಲ್ಲಿ ಕಲಿಸಿಕೊಡಲಾಗುತ್ತದೆ.ಆ ಮೂಲಕ ದೇಶದಲ್ಲಿ ಭವಿಷ್ಯದ ಪ್ರಜೆಗಳನ್ನು ರೂಪಿಸಲಾಗುತ್ತದೆ ಎಂದು ಹೇಳಿದರು.

ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಕ್ರೀಡೆ, ಯೋಗ, ಧ್ಯಾನಕ್ಕೂ ಮಹತ್ವ ನೀಡಲಾಗಿದೆ ಎಂದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್‍ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಪ್ಲ್ಯಾಸ್ಟಿಕ್‍ನಿಂದ ತಯಾರಿಸಿದ ವಸ್ತುಗಳನ್ನು ಉಪಯೋಗಿಸಬಾರದೆಂದು ಕಿವಿಮಾತು ಹೇಳಿದರು.

ಸಂಘ ಜೀವಿಯಾಗಲು ಹಾಗೂ ಪರಿಶ್ರಮದ ಬಗ್ಗೆ ತಿಳಿದು ಕೊಳ್ಳಲು ಸ್ಕೌಟ್ಸ್ ಹೆಚ್ಚು ಸಹಕಾರಿಯಾಗಲಿದೆ ಎಂದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ಉಪಾಧ್ಯಕ್ಷರಾದ ಕೊಂಡಜ್ಜಿ ಬಿ.ಷಣ್ಮುಕಪ್ಪ, ಭಾರತೀ ಚಂದ್ರಶೇಖರ್, ರಾಜ್ಯ ಆಯುಕ್ತ ಎಂ.ಎ.ಖಾಲಿದ್ ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ