ನಾಳೆಯಿಂದ ಮುಖ್ಯಮಂತ್ರಿಗಳ 2ನೇ ಗ್ರಾಮ ವಾಸ್ತವ್ಯ

ಬೆಂಗಳೂರು, ಜೂ.25- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಾಳೆಯಿಂದ ತಮ್ಮ 2ನೇ ಗ್ರಾಮವಾಸ್ತವ್ಯವನ್ನು ನಡೆಸಲಿದ್ದು, ಇಂದು ರಾತ್ರಿ ರೈಲಿನ ಮೂಲಕ ರಾಯಚೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

ನಾಳೆ ರಾಯಚೂರು ಜಿಲ್ಲೆಯ ಕರೆಗುಡ್ಡ ಗ್ರಾಮದಲ್ಲಿ ಹಾಗೂ ಗುರುವಾರ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಉಜಿಳಾಂಬ ಗ್ರಾಮದಲ್ಲಿ ಗ್ರಾಮ ವ್ಯಾಸ್ತವ್ಯವನ್ನು ಮುಖ್ಯಮಂತ್ರಿ ಮಾಡಲಿದ್ದಾರೆ.

ನಾಳೆ ಬೆಳಗ್ಗೆ ರಾಯಚೂರಿನ ಮಾನ್ವಿ ತಾಲೂಕಿನ ಕರಿಗುಡ್ಡ ಗ್ರಾಮಕ್ಕೆ ಪ್ರಯಾಣಿಸುವ ಮುಖ್ಯಮಂತ್ರಿಗಳು ಬೆಳಗ್ಗೆಯಿಂದ ಸಂಜೆಯವರೆಗೂ ಸಾರ್ವಜನಿಕರ ಕುಂದುಕೊರತೆಗಳ ಆಲಿಕೆ, ಮನವಿಗಳ ಸ್ವೀಕಾರ ನಡೆಸುವ ಮೂಲಕ ಜನತಾದರ್ಶನ ನಡೆಸಲಿದ್ದಾರೆ.

ನಾಳೆ ಸಂಜೆ ರೈತರಿಗೆ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಥಳೀಯ ಶಾಲಾ ಮಕ್ಕಳು ನಡೆಸಿಕೊಡುವ ಸಾಂಸ್ಕøತಿಕ ಕಾರ್ಯಕ್ರಮ ವೀಕ್ಷಣೆ ಮಾಡಲಿದ್ದಾರೆ.

ನಂತರ ಶಾಲಾ ಮಕ್ಕಳು ಹಾಗೂ ಶಿಕ್ಷಕರೊಂದಿಗೆ ಭೋಜನ ಮಾಡಲಿರುವ ಮುಖ್ಯಮಂತ್ರಿ, ಕರಿಗುಡ್ಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ವಾಸ್ತವ್ಯವನ್ನು ಮಾಡಲಿದ್ದಾರೆ.

ಮರುದಿನ ಬೆಳಗ್ಗೆ ಕರೆಗುಡ್ಡದಿಂದ ಬೀದರ್ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಉಜಿಳಾಂಬ ಗ್ರಾಮಕ್ಕೆ ತೆರಳಿ, ಅಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಜನತಾದರ್ಶನ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಜನರ ಕುಂದುಕೊರತೆಗಳನ್ನು ಆಲಿಸಲಿದ್ದಾರೆ.

ಅಂದು(ಜೂ.27) ಸಂಜೆ ರೈತರಿಗೆ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಲಾ ಮಕ್ಕಳು ನಡೆಸಿಕೊಡುವ ಸಾಂಸ್ಕøತಿಕ ಕಾರ್ಯಕ್ರಮ ವೀಕ್ಷಿಸಲಿದ್ದಾರೆ. ನಂತರ ಶಾಲಾ ಮಕ್ಕಳು ಮತ್ತು ಶಿಕ್ಷಕರೊಂದಿಗೆ ರಾತ್ರಿ ಭೋಜನ ಮಾಡುವ ಮುಖ್ಯಮಂತ್ರಿ ಉಜಿಳಾಂಬ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂದು ರಾತ್ರಿ ಗ್ರಾಮ ವಾಸ್ತವ್ಯ ಮಾಡಲಿದ್ದು, ಜೂ.28 ರಂದು ವಿಶೇಷ ವಿಮಾನದ ಮೂಲಕ ಬೀದರ್‍ನಿಂದ ಬೆಂಗಳೂರಿಗೆ ಮರಳುವ ಕಾರ್ಯಕ್ರಮವಿದೆ.

ರಾಯಚೂರು ವರದಿ:
ಮಾನವಿ ತಾಲ್ಲೂಕಿನ ಕರೆಗುಡ್ಡ ಗ್ರಾಮದಲ್ಲಿ ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯಕ್ಕೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ. ಕರೆಗುಡ್ಡ ಗ್ರಾಮದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ಜನತಾದರ್ಶನಕ್ಕೆ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ 14 ಕೌಂಟರ್‍ಗಳನ್ನು ತೆರೆಯಲಾಗಿದೆ.

ಮಹಿಳೆಯರು, ವೃದ್ದರು ಹಾಗೂ ವಿಕಲಚೇತನರಿಗೆ ಅರ್ಜಿ ಸಲ್ಲಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.ಸಾರ್ವಜನಿಕರಿಗೆ ಕುಡಿಯುವ ನೀರು, ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ