ಗವ್ರ್ಹಾ(ಜಾರ್ಖಂಡ್), ಜೂ.25-ಬಸ್ಸೊಂದು ಕಮರಿಗೆ ಉರುಳಿ ಆರು ಮಂದಿ ಮೃತಪಟ್ಟು, ಇತರ 43 ಮಂದಿ ತೀವ್ರ ಗಾಯಗೊಂಡ ಭೀಕರ ಘಟನೆ ಜಾರ್ಖಂಡ್ನ ಗವ್ರ್ಹಾ ಜಿಲ್ಲೆಯ ಅನುರಾಜ್ ಘಾಟಿ ಪ್ರದೇಶದಲ್ಲಿ ಇಂದು ನಸುಕಿನಲ್ಲಿ ಸಂಭವಿಸಿದೆ.
ಮೃತರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಈ ಬಸ್ ಛತ್ತೀಸ್ಗಢದ ಅಂಬಿಕಾಪುರ್ನಿಂದ ಜಾರ್ಖಂಡ್ ರಾಜಧಾನಿ ರಾಂಚಿಯಿಂದ 140 ಕಿ.ಮೀ.ದೂರದ ಗವ್ರ್ಹಾಗೆ ತೆರಳುತ್ತಿದ್ದಾಗ ಸುಮಾರು 3.30ರ ನಸುಕಿನಲ್ಲಿ ಈ ದುರಂತ ಸಂಭವಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶಿವಾನಿ ತಿವಾರಿ ತಿಳಿಸಿದ್ಧಾರೆ.
ಬಸ್ ಚಾಲಕನ ನಿಯಂತ್ರಣ ತಪ್ಪಿ ಆಳ ಕಮರಿಗೆ ಉರುಳಿ ಬಿದ್ದಿದೆ. ಸಿಆರ್ಪಿಎಫ್ ಯೋಧರು ಆರು ಮೃತದೇಹಗಳನ್ನು ಕಮರಿಯಿಂದ ಹೊರ ತೆಗೆದಿದ್ದಾರೆ. ಬಸ್ಗಳ ಕಿಟಕಿ ಗಾಜುಗಳನ್ನು ಒಡೆದು 43 ಪ್ರಯಾಣಿಕರನ್ನು ರಕ್ಷಿಸಲಾಗಿದೆ.
ತೀವ್ರ ಗಾಯಾಳುಗಳಲ್ಲಿ ಕೆಲವರನ್ನು ರಾಂಚಿಯ ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಗೆ ಸೇರಿಸಲಾಗಿದೆ. ಉಳಿದವರು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.