ಭಾರತೀಯ ಸೇನೆಯಲ್ಲಿ ಅಧಿಕಾರಿಗಳು ಸೇರಿದಂತೆ ಯೋಧರ ಕೊರತೆಯಿದೆ-ಸಚಿವ ರಾಜನಾಥ್ ಸಿಂಗ್

ನವದೆಹಲಿ, ಜೂ.25-ಭಾರತೀಯ ಭೂ ಸೇನೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಸಮಸ್ಯೆ ಜೊತೆಗೆ ಅಧಿಕ ಸಂಖ್ಯೆಯ ಸಿಬ್ಬಂದಿ ಕೊರತೆಯನ್ನೂ ಎದುರಿಸುತ್ತಿದೆ. ಭಾರತೀಯ ಸೇನೆಯಲ್ಲಿ ಪ್ರಸ್ತುತ 7,399 ಅಧಿಕಾರಿಗಳು, 38,235 ಯೋಧರ ಕೊರೆತೆ ಇದೆ. ಸ್ವತ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದನ್ನು ಒಪ್ಪಿಕೊಂಡಿದ್ದಾರೆ.

ರಾಜ್ಯಸಭಾ ಸದಸ್ಯ ಎಂ.ಪಿ.ರಾಕೇಶ್ ಸಿನ್ಹಾ ಅವರ ಲಿಖಿತ ಪ್ರಶ್ನೆಗೆ ಉತ್ತರ ನೀಡಿರುವ ಅವರು ಭಾರತೀಯ ಸೇನೆಯಲ್ಲಿ ಅಧಿಕಾರಿಗಳೂ ಸೇರಿದಂತೆ 45,544 ಯೋಧರ ಕೊರತೆ ಇದೆ ಎಂದು ತಿಳಿಸಿದ್ದಾರೆ.

ವೈರತ್ವದ ಹಗೆ ಕಾರುತ್ತಿರುವ ಪಾಕಿಸ್ತಾನ ಮತ್ತು ಚೀನಾದಂಥ ನೆರೆಹೊರೆ ದೇಶಗಳೊಂದಿಗೆ ಗಡಿಗಳನ್ನು ಹಂಚಿಕೊಂಡಿದ್ದು, ಪದೇ ಪದೇ ಉದ್ವಿಗ್ನ ಸ್ಥಿತಿ ಉಲ್ಬಣವಾಗುತ್ತಿರುವ ಸನ್ನಿವೇಶದಲ್ಲಿ ಭಾರತೀಯ ಸೇನೆಯಲ್ಲಿ ಇಷ್ಟು ದೊಡ್ಡ ಸಂಖ್ಯೆ ಯೋಧರ ಕೊರತೆ ಕಳವಳಕಾರಿ.

ಇಂಡಿಯನ್ ಆರ್ಮಿಯಲ್ಲಿ ಜನವರಿ 1, 2019ರಲ್ಲಿ ಒಟ್ಟು 45,634 ಹುದ್ದೆಗಳು ಖಾಲಿ ಇವೆ. ಇದರಲ್ಲಿ 7,399 ಹುದ್ದೆಗಳು ಸೆಕೆಂಡ್ ಲೆಫ್ಟಿನೆಂಟ್ ಶ್ರೇಣಿಗಿಂತ ಮೇಲ್ಪಟ್ಟವುಗಳಾಗಿವೆ.

ಒಂದೆಡೆ ಪಾಕಿಸ್ತಾನವು ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿಗಳನ್ನು ಮುಂದುವರಿಸಿದ್ದರೆ, ಇನ್ನೊಂದೆಡೆ ಗಡಿ ಭಾಗದಲ್ಲಿ ಅದರಲ್ಲೂ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಅಟ್ಟಹಾಸ ಸೇರಿದಂತೆ ಆಂತರಿಕ ಸಮಸ್ಯೆಗಳನ್ನು ಭಾರತ ಎದುರಿಸುತ್ತಿದೆ. ಇಂಥ ಗಂಭೀರ ಸಂದರ್ಭಗಳಲ್ಲೇ ಭಾರತೀಯ ಭೂ ಸೇನೆಯಲ್ಲಿ ಅಧಿಕಾರಿಗಳು ಮತ್ತು ಯೋಧರ ಕೊರತೆ ಎದುರಾಗಿರುವುದು ಆತಂಕಕಾರಿ ಸಂಗತಿ.

2018ರ ಆಗಸ್ಟ್‍ನಲ್ಲಿ ಆಗಿನ ರಕ್ಷಣಾ ಖಾತೆ ಸಹಾಯಕ ಸಚಿವ ಸುಭಾಷ್ ಭಾಮ್ರೆ ಅಂಕಿ-ಅಂಶ ನೀಡಿ ಜನವರಿ 1, 2018ರಲ್ಲಿ ಸೇನೆಗೆ 49,933 ಅಧಿಕಾರಿಗಳ ನೇಮಕ ಸಾಮಥ್ರ್ಯಕ್ಕೆ ಅವಕಾಶವಿತ್ತು. ಆದರೆ 42,635 ಅಧಿಕಾರಿಗಳು ಮಾತ್ರ ನೇಮಕವಾಗಿದ್ದು, 7,298 ಆಫೀಸರ್‍ಗಳ ಕೊರತೆ ಇದೆ ಎಂದು ತಿಳಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ