ಐಎಂಎ ಸಂಸ್ಥೆಗೆ ಸೇರಿದ ಮಳಿಗೆಗಳ ಮೇಲೆ ಎಸ್‍ಐಟಿಯಿಂದ ದಾಳಿ

ಬೆಂಗಳೂರು,ಜೂ.25-ಐಎಂಎ ಸಂಸ್ಥೆಗೆ ಸೇರಿದ ಇನ್ನೂ ಎರಡು ಮಳಿಗೆಗಳ ಮೇಲೆ ಎಸ್‍ಐಟಿ ಇಂದು ದಾಳಿ ಮಾಡಿದೆ.

ಯಶವಂತಪುರದ ಐಎಂಎ ಮಳಿಗೆ ಮತ್ತು ತಿಲಕ್‍ನಗರದಲ್ಲಿನ ಐಎಂಎ ಮಳಿಗೆಗಳಿಗೆ ಇಂದು ಬೆಳಗ್ಗೆ ಭೇಟಿ ನೀಡಿದ ಎಸ್‍ಐಟಿ ಅಧಿಕಾರಿಗಳ ತಂಡ ತಪಾಸಣೆ ಮಾಡುತ್ತಿದ್ದು, ಈ ಮಳಿಗೆಗಳಲ್ಲಿ ದೊರೆತಿರುವ ಚಿನ್ನಾಭರಣಗಳ ಮೌಲ್ಯ ಸಂಜೆ ವೇಳೆಗೆ ಗೊತ್ತಾಗಲಿದೆ.

ಈಗಾಗಲೇ ಜಯನಗರದ ಐಎಂಎ ಜ್ಯುವೆಲ್ಸ್ , ಶಿವಾಜಿನಗರದಲ್ಲಿನ ಐಎಂಎ ಗೋಲ್ಡ್ ಮತ್ತು ಐಎಂಎ ಜ್ಯುವೆಲ್ಸ್ ಮಳಿಗೆಗಳ ಮೇಲೆ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳು ಹಾಗೂ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಎಸ್‍ಐಟಿ ವಶಪಡಿಸಿಕೊಂಡಿದೆ.

ಐಎಂಎ ಸಂಸ್ಥೆಯ ವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್‍ಐಟಿ ಈಗಾಗಲೇ ಐಎಂಎ ಮಳಿಗೆಗಳ ಮೇಲೆ ಶೋಧ ಮುಂದುವರೆಸಿ 41.62 ಕೆಜಿ ಚಿನ್ನಾಭರಣ, 14.5 ಕ್ಯಾರೆಟ್ ಡೈಮಂಡ್, 72.24 ಕೆಜಿ ಬೆಳ್ಳಿ, 60 ಕ್ಯಾರೆಟ್ ಹರಳುಗಳು ಹಾಗೂ 58 ಗುಂಡುಗಳೊಂದಿಗೆ .32 ರಿವಾಲ್ವರ್, 13.45 ಲಕ್ಷ ಹಣವನ್ನು ವಶಪಡಿಸಿಕೊಂಡಿದೆ.

ಐಎಂಎ ಗೋಲ್ಡ್ ಮತ್ತು ಐಎಂಎ ಜ್ಯುವೆಲ್ಸ್ ಮಳಿಗೆಗಳ ದಾಳಿಗಳಿಂದ ವಶಪಡಿಸಿಕೊಂಡಿರುವ ಚಿನ್ನಾಭರಣ ಹಾಗೂ ನಗದು ಸೇರಿದಂತೆ ಎಲ್ಲ ವಸ್ತುಗಳ ಮೌಲ್ಯ 11.72 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ