ಸರ್ಕಾರಿ ಅಧಿಕಾರಿಗಳಿಂದ ನನ್ನ ಹೆಸರು ದುರ್ಬಳಕೆ-ಬಿಜೆಪಿ ವಕ್ತಾರ ಎನ್.ಆರ್.ರಮೇಶ್

ಬೆಂಗಳೂರು, ಜೂ.25- ಸರ್ಕಾರಿ ಅಧಿಕಾರಿಗಳು ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಹಾಗೂ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಅವರು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯಲ್ಲಿ ತಾಂತ್ರಿಕ ನಿರ್ದೇಶಕರಾಗಿರುವ ಮೋಹನ್‍ಕುಮಾರ್ ಅವರು ವೃತ್ತಿ ವೈಷಮ್ಯದಿಂದ ಸಹೋದ್ಯೋಗಿಗಳ ವಿರುದ್ಧ ನನ್ನ ಹೆಸರಿನಲ್ಲಿ ಮುಖ್ಯ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿದ್ದಾರೆ ಎಂದು ಅವರು ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ಮೋಹನ್‍ಕುಮಾರ್ ಅವರು ಕೊಳಚೆ ನಿರ್ಮೂಲನಾ ಮಂಡಳಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಕಂದಾಯಾಧಿಕಾರಿಗಳು , ಅಧೀಕ್ಷಕರುಗಳು ಅವ್ಯವಹಾರದಲ್ಲಿ ತೊಡಗಿದ್ದು , ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರಿಗೆ ದೂರು ಸಲ್ಲಿಸಿದ್ದಾರೆ.

ಸದರಿ ದೂರಿನಲ್ಲಿ ಎಆರ್‍ಒ ಸೋಮಶೇಖರ್ ಅವರ ಮಗ ಚೇತನ್, ಮುನಿರಾಜು ಅವರ ಮಗ ಪ್ರಶಾಂತ್ , ಬಾಲರಾಜ್ ಅವರ ಸೋದರಳಿಯ ಮಂಜುನಾಥ್ ಮತ್ತಿತರರು ಅವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ಮೋಹನ್‍ಕುಮಾರ್ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿದ್ದಾರೆ.

ದೂರು ನೀಡಿರುವ ಮೋಹನ್‍ಕುಮಾರ್ ಅವರು ವೃತ್ತಿ ವೈಷಮ್ಯದಿಂದ ತಾವು ನೀಡಿರುವ ದೂರನ್ನು ಮುಚ್ಚಿಟ್ಟು ನನ್ನ ಹೆಸರಿನಲ್ಲಿ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿ ಅಕ್ರಮವೆಸಗಿದ್ದಾರೆ.

ನಾನು ಯಾವುದೇ ದೂರನ್ನಾಗಲಿ ಅಥವಾ ಮನವಿ ಪತ್ರಗಳನ್ನಾಗಲಿ ನನ್ನ ಲೆಟರ್‍ಹೆಡ್‍ನಲ್ಲೇ ಮಾತ್ರವೇ ಸಲ್ಲಿಸುತ್ತೇನೆ. ಯಾವುದೇ ಬಿಳಿ ಹಾಳೆಯನ್ನು ಉಪಯೋಗಿಸುವುದಿಲ್ಲ. ಮೋಹನ್‍ಕುಮಾರ್ ನೀಡಿರುವ ದೂರಿನ ಪ್ರತಿಯಲ್ಲಿರುವ ಸಹಿಗೂ, ನನ್ನ ಸಹಿಗೂ ವ್ಯತ್ಯಾಸವಿದೆ. ಹೀಗಾಗಿ ಕೂಡಲೇ ನನ್ನ ಹೆಸರನ್ನು ಪೋರ್ಜರಿ ಮಾಡಿರುವ ಮೋಹನ್‍ಕುಮಾರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಎನ್.ಆರ್.ರಮೇಶ್ ದೂರಿನಲ್ಲಿ ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ