ಕಳೆದ ಐದು ವರ್ಷಗಳಿಂದ ಸೂಪರ್ ಎಮೆರ್ಜೆನ್ಸಿ ಇದೆ-ಮಮತಾ ಬ್ಯಾನರ್ಜಿ

ನವದೆಹಲಿ, ಜೂ.25- ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀಕ್ಷ್ಣ ವಾಗ್ದಾಳಿ ಮುಂದುವರಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 44 ವರ್ಷಗಳ ಹಿಂದೆ ದೇಶದಲ್ಲಿ ತುರ್ತು ಪರಿಸ್ಥಿತಿ ಇತ್ತು. ಭಾರತದಲ್ಲಿ ಕಳೆದ ಐದು ವರ್ಷಗಳಿಂದ ಸೂಪರ್ ಎಮೆರ್ಜೆನ್ಸಿ ಇದೆ ಎಂದು ಎನ್‍ಡಿಎ ಸರ್ಕಾರವನ್ನು ಲೇವಡಿ ಮಾಡಿದ್ದಾರೆ.

ಆಗಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಜೂನ್ 25, 1975ರಲ್ಲಿ ದೇಶಾದ್ಯಂತ ವಿಧಿಸಿದ ತುರ್ತು ಪರಿಸ್ಥಿತಿಯ 44ನೇ ವರ್ಷಾಚರಣೆ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಟಿಎಂಸಿ ನಾಯಕಿ ಮಮತಾ, ಮೋದಿ ಸರ್ಕಾರದ ವಿರುದ್ದ ಟೀಕಾಸ್ತ್ರಗಳನ್ನು ಪ್ರಯೋಗಿಸಿದ್ದಾರೆ.

1975ರಲ್ಲಿ ಘೋಷಣೆಯಾದ ತುರ್ತು ಪರಿಸ್ಥಿತಿಗೆ ಇಂದು 44ನೇ ವರ್ಷ. ಆದರೆ ಕಳೆದ ಐದು ವರ್ಷಗಳಿಂದ ದೇಶವು ಸೂಪರ್ ಎಮೆರ್ಜೆನ್ಸಿ ಮೂಲಕ ಸಾಗುತ್ತಿದೆ.

ನಾವು ಇತಿಹಾಸದಿಂದ ಪಾಠ ಕಲಿತು ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸಲು ಹೋರಾಡಬೇಕಾದ ಅಗತ್ಯವಿದೆ ಎಂದು ದೀದಿ ಟ್ವೀಟ್‍ನಲ್ಲಿ ಹೇಳಿದ್ದಾರೆ.

ಕೇಜ್ರಿವಾಲ್ ಪ್ರತಿಕ್ರಿಯೆ : ದೆಹಲಿ ಮುಖ್ಯಮಂತ್ರಿ ಮತ್ತು ಅಮ್ ಆದ್ಮಿ ಪಾರ್ಟಿ(ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಪ್ರತಿಕ್ರಿಯಿಸಿ, ನಮ್ಮ ದೇಶದಲ್ಲಿ ಮತ್ತೆ ತುರ್ತು ಪರಿಸ್ಥಿತಿಯಂಥ ಕರಾಳ ಘಟನೆಗೆ ಆಸ್ಪದ ನೀಡದಂತೆ ನಾವೆಲ್ಲರೂ ಪ್ರತಿಜ್ಞೆ ಮಾಡಬೇಕೆಂದು ಸಲಹೆ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ