ಬೆಂಗಳೂರು, ಜೂ.25- ರಾಜ್ಯದ ಹಲವಾರು ಇಲಾಖೆಗಳಲ್ಲಿ ಹಿಂಬಡ್ತಿಗೆ ಒಳಗಾಗಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಮುಂಬಡ್ತಿ ನೀಡಿ ಸ್ಥಳ ನಿಯುಕ್ತಿ ಮಾಡುವಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಮಾಜಿ ಸಚಿವ ನರೇಂದ್ರ ಸ್ವಾಮಿ ಆರೋಪಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾವಂತ ನೌಕರರಿಗೆ ಸುಪ್ರೀಂ ಕೋರ್ಟ್ ಮುಂಬಡ್ತಿ ನೀಡಿ ಸ್ಥಳ ನಿಯುಕ್ತಿಗೆ ಸೂಚನೆ ನೀಡಿ ತೀರ್ಪು ಕೊಟ್ಟಿದ್ದರೂ ಸಹ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ವಹಿಸದೆ ನಿರ್ಲಕ್ಷ್ಯ ತಾಳಿರುವುದು ಖಂಡನಿಯ ಎಂದ ಅವರು, ಇದರಿಂದ ಈ ನೌಕರರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯ ಸಿಗದೆ ವಂಚಿತರಾಗಿದ್ದಾರೆ ಎಂದು ದೂರಿದರು.
ಇಲಾಖೆಯಲ್ಲಿ ಹುದ್ದೆ ಖಾಲಿಯಿದ್ದರೂ ಮಾತೃ ಇಲಾಖೆಯಿಂದ ಇನ್ನಿತರೆ ಇಲಾಖೆಗೆ ಅವಶ್ಯಕತೆಯಿಲ್ಲದಿದ್ದರೂ ನಿಯೋಜನೆ ಮಾಡುತ್ತಿದ್ದಾರೆ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ಒಬ್ಬರಿಗೆ ಹಾಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಆ ಹುದ್ದೆಯೊಂದಿಗೆ 2-3ಹುದ್ದೆಯ ಪ್ರಭಾರದಲ್ಲಿರಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಈ ಸಮುದಾಯದವರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿ ಸಚಿವರು, ವಿರೋಧ ಪಕ್ಷದವರು ಈ ವಿಚಾರದ ಬಗ್ಗೆ ಸ್ಪಷ್ಟ ನಿಲುವು ತಳೆಯಬೇಕು.ಸರ್ಕಾರದ ಗಮನ ಸೆಳೆದು ಈ ನೌಕರರಿಗೆ ಆಗುತ್ತಿರುವ ತಾರತಮ್ಯ ಸರಿಪಡಿಸಬೇಕೆಂದು ಆಗ್ರಹಿಸಿದರು.
ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ರೂಪಿಸಿದ ಕಾಯ್ದೆ ಇಂದು ಸಮ್ಮಿಶ್ರ ಸರ್ಕಾರದಲ್ಲಿ ಜಾರಿಗೊಳ್ಳದಿರುವಾಗ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಅವರು ಈ ವಿಚಾರದಲ್ಲಿ ಜವಾಬ್ದಾರಿ ಪ್ರದರ್ಶಿಸಬೇಕೆಂದು ಒತ್ತಾಯಿಸಿದರು.
441 ಎಂಜಿನಿಯರ್ಗಳು ಹಿಂಬಡ್ತಿ ಪಡೆದಿದ್ದು, 215 ಇಇಗಳಲ್ಲಿ ಇಬ್ಬರಿಗೆ ಮಾತ್ರ ಪೋಸ್ಟಿಂಗ್ ನೀಡಲಾಗಿದೆ.ಸುಮಾರು 250 ಇಇಗಳ ಹುದ್ದೆ ಖಾಲಿ ಇದ್ದರೂ ನೇಮಕ ಮಾಡಿಲ್ಲ. 2019ರ ಮೇ 15ರಂದು ಡಿಪಿಎಆರ್ನಿಂದ 15 ದಿನಗಳಲ್ಲಿ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ಹಾಗೂ 30 ದಿನಗಳಲ್ಲಿ ಶಾಶ್ವತ ಜ್ಯೇಷ್ಠತಾ ಪಟ್ಟಿ ತಯಾರಿಸಿ ಪ್ರಕಟಿಸಲು ನಿರ್ದೇಶನ ನೀಡಿದ್ದರೂ ಕೆಲವು ಇಲಾಖೆಗಳಲ್ಲಿ ಮಾತ್ರ ಕಾರ್ಯಗತವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಸುಪ್ರಿಂಕೋರ್ಟ್ ಅದೇಶವನ್ನು ಪಾಲಿಸಿ ಸಾಮಾಜಿಕ ನ್ಯಾಯದಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.