ಕರ್ನಾಟಕದ ವಾದವನ್ನು ಮಾನ್ಯ ಮಾಡಿದ ಸಿಡಬ್ಲ್ಯುಎಂಎ

ನವದೆಹಲಿ, ಜೂ.25-ಮುಂಗಾರು ಮಳೆ ಕೊರತೆಯಿಂದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ತೀವ್ರ ಕೊರತೆ ಇರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗದು ಎಂಬ ಕರ್ನಾಟಕದ ವಾದವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮಾನ್ಯ ಮಾಡಿದೆ. ಅಲ್ಲದೇ ಉತ್ತಮ ಮಳೆಯಾದರೆ ಮಾತ್ರ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡಿದೆ ಇದರಿಂದ ತೀವ್ರ ಜಲಸಂಕಷ್ಟದಲ್ಲಿರುವ ಕರ್ನಾಟಕ ಮತ್ತೊಮ್ಮೆ ತಮಿಳುನಾಡು ತಗಾದೆಯಿಂದ ಪಾರಾಗಿ ನಿರಾಳವಾಗಿದೆ.

ಬರ ಪರಿಸ್ಥಿತಿಯೊಂದಿಗೆ ಮುಂಗಾರು ಮಳೆ ವಿಳಂಬದಿಂದಾಗಿ ತೀವ್ರ ನೀರಿನ ಸಮಸ್ಯೆ ಎದುರಾಗಿರುವ ಸಂದರ್ಭದಲ್ಲೇ ದೆಹಲಿಯಲ್ಲಿಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಗೆ(ಸಿಡಬ್ಲ್ಯುಎಂಎ) ರಾಜ್ಯ ಸರ್ಕಾರ ಕರ್ನಾಟಕದಲ್ಲಿನ ನೀರಿನ ತೀವ್ರ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಟ್ಟು ತಮಿಳುನಾಡಿಗೆ ಸದ್ಯದ ಪರಿಸ್ಥಿತಿಯಲ್ಲಿ ನೀರು ಬಿಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು.

ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿದ ಸಿಡಬ್ಲ್ಯುಎಂಎ ಅಧ್ಯಕ್ಷ ಮಸೂದ್ ಹುಸೇನ್, ಜೂನ್‍ನಲ್ಲಿ ಉತ್ತಮ ಮುಂಗಾರು ಮಳೆಯನ್ನು ನೀರಿಕ್ಷಿಸಲಾಗಿತ್ತು. ಆದರೆ ಮುಂಗಾರು ವಿಳಂಬದಿಂದ ಎಲ್ಲ ರಾಜ್ಯಗಳಲ್ಲೂ ನೀರಿನ ತೀವ್ರ ಸಮಸ್ಯೆ ಎದುರಾಗಿದೆ. ಉತ್ತಮ ಮಳೆಯಾಗಿ ಒಳಹರಿವು ಹೆಚ್ಚಾದರೇ ಮಾತ್ರ ನೀರು ಹರಿಸಲು ಸಾಧ್ಯ ಎಂದು ಸ್ಪಷ್ಟಪಡಿಸಿದರು. ಇದರಿಂದಾಗಿ ಕರ್ನಾಟಕ ಮತ್ತೊಂದು ಜಲಸಂಕಷ್ಟದಿಂದ ಬಚಾವ್ ಆಗಿದೆ.

ಮಸೂದ್ ಹುಸೇನ್ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿಯ ಪ್ರತಿನಿಧಿಗಳು ಹಾಗೂ ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.

ಕರ್ನಾಟಕದಲ್ಲಿ ಉತ್ತಮ ಮುಂಗಾರು ಮಳೆಯಾದರೆ ಜೂನ್ ತಿಂಗಳಲ್ಲಿ ತಮಿಳುನಾಡಿಗೆ 9.19 ಟಿಎಂಸಿ ಅಡಿಗಳಷ್ಟು ನೀರು ಹರಿಸಬೇಕು ಎಂದು ಈ ಹಿಂದಿನ ಸಭೆಯಲ್ಲಿ ಪ್ರಾಧಿಕಾರವು ಕರ್ನಾಟಕಕ್ಕೆ ತಿಳಿಸಿತ್ತು. ಆದರೆ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಕೆಆರ್‍ಎಸ್ ಸೇರಿದಂತೆ ಕಾವೇರಿ ಕೊಳ್ಳದ ಬಹುತೇಕ ಡ್ಯಾಂಗಳು ಬರಿದಾಗಿವೆ. ಕುಡಿಯುವ ನೀರಿಗೇ ತತ್ವಾರ ಉಂಟಾಗಿರುವ ಈ ಸನ್ನಿವೇಶದಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ, ಉತ್ತಮ ಮಳೆಯಾದರೆ ಮಾತ್ರ ತಮಿಳುನಾಡಿಗೆ ಮುಂದೆ ನೀರು ಬಿಡಲು ಸಾಧ್ಯ ಎಂದು ಕರ್ನಾಟಕ ಸ್ಪಷ್ಟ ಮಾತುಗಳಲ್ಲಿ ಹೇಳಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕರ್ನಾಟಕದಲ್ಲಿ ಜೂನ್ ತಿಂಗಳಲ್ಲಿ ವಾಡಿಕೆಯಂತೆ ಮಳೆಯಾಗಿಲ್ಲ. ಡ್ಯಾಂಗಳು ನಿರೀಕ್ಷಿತ ಮಟ್ಟದಲ್ಲಿ ಭರ್ತಿಯಾಗಿಲ್ಲ. ಕಾವೇರಿ ಕೊಳ್ಳದ ಜಲಾಶಯಗಳು ಬರಿದಾಗಿವೆ. ನಮ್ಮ ಬೆಳೆಗಳಿಗೆ ನೀರಿಲ್ಲ, ಕುಡಿಯುವ ನೀರಿಗೂ ತೀವ್ರ ಸಮಸ್ಯೆ ಎದುರಾಗಿದೆ. ಇಂಥ ವಾಸ್ತವ ಸನ್ನಿವೇಶದಲ್ಲಿ ತಮಿಳುನಾಡಿಗೆ ನೀರು ಹರಿಸಲು ಹೇಗೆ ಸಾಧ್ಯ ಎಂದು ಕರ್ನಾಟಕದ ಪ್ರತಿನಿಧಿಗಳು ಅಸಹಾಯಕತೆಯಿಂದ ಪ್ರಶ್ನಿಸಿದರು.

31.24 ಟಿಎಂಸಿ ನೀರಿಗೆ ಬೇಡಿಕೆ :
ಆದರೆ ಕರ್ನಾಟಕದ ಈ ವಾದಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿತು. ತಮಿಳುನಾಡಿನಲ್ಲಿ ಹಿಂದೆಂದೂ ಕಂಡು ಕೇಳರಿಯದಂತಹ ಜಲಸಂಕಷ್ಟ ಎದುರಾಗಿದೆ. ನೀರಿಗೆ ಹಾಹಾಕಾರಉಂಟಾಗಿದೆ. ನೀರಿಲ್ಲದೆ ಕುರುವೈ ಸೇರಿದಂತೆ ಅನೇಕ ಬೆಳೆಗಳು ಒಣಗಿ ಭಾರೀ ಹಾನಿ ಸಂಭವಿಸಿದೆ. ಪ್ರಾಧಿಕಾರಿದ ಸೂಚನೆಯಂತೆ 9.19 ಅಡಿ ಟಿಎಂಸಿ ನೀರನ್ನು ಕರ್ನಾಟಕ ಮೆಟ್ಟೂರು ಡ್ಯಾಂಗೆ ಹರಿಸಿಲ್ಲ ಎಂದು ಆರೋಪಿಸಿತು.

ಈ ಎಲ್ಲಾ ಕಾರಣಗಳಿಂದ ಈಗಾಗಲೇ ಪ್ರಾಧಿಕಾರ ನೀಡಿರುವ ಸಲಹೆಯಂತೆ ಜೂನ್ ತಿಂಗಳ ಪಾಲಿನ ತನ್ನ ನೀರನ್ನು ಬಿಡುಗಡೆ ಮಾಡಬೇಕೆಂದು ತಮಿಳುನಾಡು ಪ್ರತಿನಿಧಿಗಳು ಆಗ್ರಹಿಸಿದರು. ಅಲ್ಲದೇ ನೀರನ್ನು ಜೂನ್ 30ರ ಒಳಗೆ ತಮಿಳುನಾಡಿಗೆ ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಬೇಕು ಎಂಗು ಪ್ರಾಧಿಕಾರದ ಅಧ್ಯಕ್ಷ ಮಸೂದ್ ಹುಸೇನ್ ಅವರಿಗೆ ಮನವಿ ಸಲ್ಲಿಸಿದೆ. ಜೊತೆಗೆ ಜುಲೈ ತಿಂಗಳ 31.24 ಟಿಎಂಸಿ ಅಡಿಗಳಷ್ಟು ನೀರನ್ನೂ ಸಹ ಹರಿಸುವಂತೆ ಆಗ್ರಹಿಸಿದೆ.

ಕರ್ನಾಟಕದಲ್ಲೂಇದೇ ಪರಿಸ್ಥಿತಿ ಉದ್ಭವಿಸಿದೆ. ನಮ್ಮ ಬೆಳೆಗಳಿಗೂ ನೀರಿಲ್ಲ. ಡ್ಯಾಂಗಳು ಖಾಲಿ ಖಾಲಿಯಾಗಿವೆ. ನೀರಿನ ಹಾಹಾಕಾರ ಉಂಟಾಗುದೆ ಎಂದು ರಾಜ್ಯದ ಪ್ರತಿನಿಧಿಗಳು ಪ್ರಾಧಿಕಾರಕ್ಕೆ ಮನವಿ ಮಾಡಿದಾಗ ತಮಿಳುನಾಡು ಮತ್ತುರಾಜ್ಯದ ಪ್ರತಿನಿಧಿಗಳ ನಡುವೆ ವಾದ-ವಾಗ್ವಾದ ನಡೆಯಿತು ಎಂದು ಮೂಲಗಳು ಹೇಳಿವೆ.

ಮೇಕೆ ದಾಟು ಡ್ಯಾಂಗೆ ಮತ್ತೆ ತಗಾದೆ :
ಇದೇ ಸಂದರ್ಭದಲ್ಲಿ ಕರ್ನಾಟಕವು ಪ್ರಾಧಿಕಾರದ ಸಭೆಯ ಕಾರ್ಯಸೂಚಿಯಲ್ಲಿ (ಅಜೆಂಡಾ) ಮೇಕೆದಾಟು ಡ್ಯಾಂ ನಿರ್ಮಾಣ ವಿಷಯವನ್ನು ಸೇರಿಸಿರುವುದಕ್ಕೆ ತಮಿಳುನಾಡು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಯಾವುದೇ ಕಾರಣಕ್ಕೂ ಕಾವೇರಿ ನದಿಗೆ ಅಡ್ಡಲಾಗಿ ಅಣಕಟ್ಟು ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ತಮಿಳುನಾಡು ಪ್ರತಿನಿಧಿಗಳು ಆಗ್ರಹಿಸಿದರು.

ಕೇರಳ ಮತ್ತು ಪುದುಚೇರಿ ರಾಜ್ಯಗಳ ಪ್ರತಿನಿಧಿಗಳೂ ಸಹ ತಮ್ಮ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಉದ್ಭವಿಸಿರುವ ನೀರಿ£ ಗಂಭೀರ ಸಮಸ್ಯೆ ಬಗ್ಗೆ ಪ್ರಾಧಿಕಾರ ಅಧ್ಯಕ್ಷರಿಗೆ ಮನವಿ ಮಾಡಿಕೊಟ್ಟರು.

ಈ ಹಿಂದೆ ನಡೆದ ಪ್ರಾಧಿಕಾರ ಸಭೆಯಲಿ ್ಲಅಧ್ಯಕ್ಷ ಮಸೂದ್ ಹುಸೇನ್ ಉತ್ತಮ ಮಳೆಯಾದರೆ ಕರ್ನಾಟಕದಿಂದ ತಮಿಳುನಾಡಿಗೆ ಜೂನ್ ತಿಂಗಳ 9.19 ಟಿಎಂಸಿ ಅಡಿಗಳಷ್ಟು ನೀರು ಹರಿಸಬೇಕು.ಇದು ಮುಂಗಾರು ಮಳೆ ಮೇಲೆ ಅವಲಂಬಿತವಾಗಿರುತ್ತದೆಎಂದು ತಿಳಿಸಿದ್ದರು. ಇದರಿಂದಕರ್ನಾಟಕರಾಜ್ಯಕ್ಕೆ ನಿರಾಳವಾಗಿತ್ತು. ಆದರೆ ಮುಂಗಾರು ಮಳೆ ವಿಳಂಬವಾಗಿ ಕಾವೇರಿ ಜಲಾನಯನ ಪ್ರದೇಶದ ಕೆಆರ್‍ಎಸ್ ಸೇರಿ ವಿವಿಧ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಗಂಭೀರವಾಗಿ ಕುಸಿದಿರುವುದರಿಂದ ಸದ್ಯಕ್ಕೆ ತಮಿಳುನಾಡಿಗೆ ನೀರು ಬಿಡದಿರುವ ಪರಿಸ್ಥಿತಿ ಉದ್ಭವಿಸಿದ್ದು, ಈ ಎಲ್ಲಾ ಅಂಶಗಳನ್ನು ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ