ಟೀಂ ಇಂಡಿಯಾ ವಿರುದ್ಧದ ಸೋಲಿನಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಪಾಕಿಸ್ತಾನ ಇದೀಗ ಗೆಲುವಿನ ನಗೆ ಬೀರಿದೆ. ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 49 ರನ್ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 9ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಜಿಗಿದಿದೆ. ಆದರೆ 5ನೇ ಸೋಲು ಕಂಡಿರುವ ಸೌತ್ ಆಫ್ರಿಕಾ ಮತ್ತೆ ಮುಖಭಂಗಕ್ಕೆ ಒಳಗಾಗಿದೆ.
ಗೆಲುವಿಗೆ 309 ರನ್ ಟಾರ್ಗೆಟ್ ಪಡೆದ ಸೌತ್ ಆಫ್ರಿಕಾ ಎಂದಿನಂತೆ ಬ್ಯಾಟಿಂಗ್ನಲ್ಲೂ ವೈಫಲ್ಯ ಅನುಭವಿಸಿತು. ಹಶಿಮ್ ಆಮ್ಲಾ ಕೇವಲ 2 ರನ್ ಸಿಡಿಸಿ ಔಟಾದರು. ಕ್ವಿಂಟನ್ ಡಿಕಾಕ್ ಹಾಗೂ ನಾಯಕ ಫಾಪ್ ಡುಪ್ಲೆಸಿಸ್ ಜೊತೆಯಾಟದಿಂದ ಸೌತ್ ಆಫ್ರಿಕಾ ಚೇತರಿಸಿಕೊಂಡರೂ ಗೆಲುವಿನತ್ತ ಹೆಜ್ಜೆ ಹಾಕಲಿಲ್ಲ. ಈ ಜೋಡಿ 87 ರನ್ ಜೊತೆಯಾಟ ನೀಡಿತು. ಡಿಕಾಕ್ 47 ರನ್ ಸಿಡಿಸಿ ನಿರ್ಗಮಿಸಿದರು.ಫಾಫ್ ಡುಪ್ಲೆಸಿಸ್ ಅರ್ಧಶತಕ ಸಿಡಿಸಿ ಹೋರಾಟ ಮುಂದುವರಿಸಿದರೆ, ಆ್ಯಡಿನ್ ಮಕ್ರಂ 7ರನ್ಗೆ ಸುಸ್ತಾದರು. ಡುಪ್ಲೆಸಿಸ್ 63 ರನ್ ಕಾಣಿಕೆ ನೀಡಿದರು. ಇತ್ತ ರಸಿ ವ್ಯಾಂಡರ್ ಡಸೆನ್ 36 ರನ್ ಸಿಡಿಸಿದರು. ಡೇವಿಡ್ ಮಿಲ್ಲರ್ 31 ರನ್ ಸಿಡಿಸಿ ಔಟಾದರು.
ಆದರೆ ಯಾರೂ ಕೂಡ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. ರನ್ ಚೇಸ್ನತ್ತ ಗಮನ ಹರಿಸಲೇ ಇಲ್ಲ. ಕ್ರಿಸ್ ಮೊರಿಸ್, ಕಾಗಿಸೋ ರಬಾಡ, ಲುಂಗಿ ಎನ್ಗಿಡಿ ಬಂದ ಹಾದಿಯಲ್ಲೇ ವಾಪಾಸ್ಸಾದರು.
ಆ್ಯಂಡಿಲ್ ಫೆಲುಕ್ವಾಯೋ ಕೊನೆಯವರೆಗೂ ಹೋರಾಟ ನೀಡಿದರೂ ಗೆಲುವು ಸಿಗಲಿಲ್ಲ. ಫೆಲುಕ್ವಾಯೋ ಅಜೇಯ 46 ರನ್ ಸಿಡಿಸಿದರು. ಸೌತ್ ಆಫ್ರಿಕಾ 9 ವಿಕೆಟ್ ನಷ್ಟಕ್ಕೆ 259 ರನ್ ಸಿಡಿಸಿತು. ಇದರೊಂದಿಗೆ ಪಾಕಿಸ್ತಾನ 49 ರನ್ ಗೆಲುವು ಸಾಧಿಸಿತು.