ಬೆಂಗಳೂರು, ಜೂ.23-ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಭೂ ಹಿಡುವಳಿ ಹೊಂದಿರುವ ಎಲ್ಲಾ ರೈತರಿಗೂ ವಿಸ್ತರಿಸಿ ಅನುಷ್ಠಾನಗೊಳಿಸಲಾಗುತ್ತಿದ್ದು, ರೈತರ ಮಾಹಿತಿ ಒದಗಿಸಲು ಜೂ.30 ಕಡೇ ದಿನವಾಗಿದೆ.
ಕೇಂದ್ರ ಸರ್ಕಾರದ ಶೇ.100ರಷ್ಟು ಅನುದಾನದ ಈ ಯೋಜನೆಯನ್ನು ಎಲ್ಲಾ ರೈತರಿಗೂ ವಿಸ್ತರಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಮಾಹಿತಿ ಒದಗಿಸಿದ್ದಾರೆ.
ಯೋಜನೆಯ ಪರಿಷ್ಕøತ ಮಾರ್ಗಸೂಚಿಯನ್ನು ರೈತರಿಗೆ ಒದಗಿಸಿ ಯೋಜನೆಯ ಪ್ರಯೋಜನ ಪಡೆಯುವಂತೆ ಮಾರ್ಗದರ್ಶನ ಮಾಡುವಂತೆ ಕಂದಾಯ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ರೈತರಿಂದ ಮಾಹಿತಿಯನ್ನು ಭರ್ತಿ ಮಾಡಿಸಿ ಅದನ್ನು ಪರಿಶೀಲಿಸಿದ ನಂತರ ಪ್ರಧಾನಮಂತ್ರಿ ಕಿಸಾನ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಬೇಕು. ಅಪ್ಲೋಡ್ ಮಾಡಲು ಅನುಕೂಲವಾಗುವಂಥೆ ನಾಡಕಚೇರಿಯ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ಈಗಾಗಲೇ ಬಳಕೆದಾರರ ಗುರುತಿನ ಪಾಸ್ವರ್ಡ್ನ ಮಾಹಿತಿ ನೀಡಲಾಗಿದೆ. ಜೂ.30ರೊಳಗೆ ರೈತರ ಮಾಹಿತಿಯನ್ನು ಸಮಾರೋಪಾದಿಯಲ್ಲಿ ಅಪ್ಲೋಡ್ ಮಾಡಲು ಕ್ರಮಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆಯನ್ನು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ರಾಜ್ಕುಮಾರ್ ಕತ್ರಿ ನೀಡಿದ್ದಾರೆ.
ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ರೈತರಿಗೆ ನಿಗದಿತ ನಮೂನೆಗಳನ್ನು ಒದಗಿಸಿ ಮಾಹಿತಿ ಪಡೆದು ಅಪ್ಲೋಡ್ ಮಾಡುವಂತೆ ಸೂಚಿಸಿದ್ದು, ಒಂದು ವೇಳೆ ಉದಾಸೀನ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.