ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ನಾಲ್ವರು ಉಗ್ರರ ಹತ್ಯೆ

ಶ್ರೀನಗರ, ಜೂ.23-ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಾರೀ ವಿಧ್ವಂಸಕಕೃತ್ಯ ಎಸಗಲು ಸಜ್ಜಾಗಿದ್ದ ಭಯೋತ್ಪಾದಕರ ಕುತಂತ್ರವೊಂದನ್ನು ವಿಫಲಗೊಳಿಸಿರುವ ಸೇನಾ ಪಡೆಗಳು ನಾಲ್ವರು ಉಗ್ರಗಾಮಿಗಳನ್ನು ಹೊಡೆದುರುಳಿಸಿದ್ಧಾರೆ. ಅಲ್ಲದೇ ಭಾರೀ ಪ್ರಮಾಣದ ಶಸ್ತಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಪೋಟಕಗಳನ್ನು ವಶಪಡಿಸಿಕೊಂಡು ಅಡಗುದಾಣವೊಂದನ್ನುಯೋಧರು ಸ್ಫೋಟಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‍ ಜಿಲ್ಲೆಯ ದಾರಮ್ದೊರಾಕೀಗಪ್ ಪ್ರದೇಶದಲ್ಲಿ ಸೇನಾ ಪಡೆಗಳಿಂದ ಇಂದು ಮುಂಜಾನೆ ಈ ಭರ್ಜರಿಕಾರ್ಯಾಚರಣೆ ನಡೆಸಿದೆ.

ಈ ಯಶಸ್ವಿ ಕಾರ್ಯಾಚರಣೆಯೊಂದಿಗೆ ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನಿ ಕೃಪಾ ಪೋಷಿತ ಭಯೋತ್ಪಾದಕರಿಂದ ನಡೆಯಬಹುದಾಗಿದ್ದ ಭಾರೀ ದಾಳಿ ತಪ್ಪಿದಂತಾಗಿದೆ.

ದಾರಮ್ದೊದಾಕೀಗಮ್ ಪ್ರದೇಶದಲ್ಲಿಉಗ್ರರ ಗುಂಪೊಂದು ಅವಿತಿಟ್ಟುಕೊಂಡು ಭಾರಿ ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗಿದೆ ಎಂಬ ಖಚಿತ ಸುಳಿವಿನ ಮೇರೆಗೆ 33 ರಾಷ್ಟ್ರೀಯರೈಫಲ್ಸ್ (33-ಆರ್‍ಆರ್) ಹಾಗೂ ಜಮ್ಮು ಮತ್ತು ಕಾಶ್ಮೀರದ ವಿಶೇಷ ಕಾರ್ಯಾಚರಣೆ ಸಮೂಹ (ಎಸ್‍ಒಜಿ) ಸಿಬ್ಬಂದಿ ನಿನ್ನೆ ಮಧ್ಯರಾತ್ರಿಯಿಂದಲೇ ಈ ಪ್ರದೇಶವನ್ನು ಸುತ್ತುವರಿದಿತ್ತು.

ಉಗ್ರರಿಗಾಗಿ ಶೋಧಕಾರ್ಯಾಚರಣೆ ನಡೆಸುತ್ತಿದ್ಧಾಗ ಮರೆಯಲ್ಲಿಅವಿತಿಟ್ಟುಕೊಂಡಿದ್ದ ಭಯೋತ್ಪಾದಕರು ಯೋಧರತ್ತ ಗುಂಡು ಹಾರಿಸಿದರು. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ದಾಳಿ ನಡೆಸಿದಾಗ ದೀರ್ಘ ಕಾಲ ಗುಂಡಿನ ಚಕಮಕಿ ನಡೆಯಿತು.

ನಂತರ ಉಗ್ರರ ಕಡೆಯಿಂದ ಗುಂಡಿನ ದಾಳಿಯ ಮೊರೆತ ನಿಂತಾಗ ಆ ಸ್ಥಳಕ್ಕೆ ಯೋಧರು ಧಾವಿಸಿ ಪರಿಶೀಲಿಸಿದಾಗ ನಾಲ್ವರುಉಗ್ರರು ಹತರಾಗಿದ್ದರು. ಮೃತರ ಬಳಿ ಇದ್ದ ಎಕೆ-47 ಮತ್ತು ಎಕೆ-56 ರೈಫಲ್‍ಗಳು, ಬುಲೆಟ್‍ಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪ್ರದೇಶದಲ್ಲಿಯೋಧರು ತೀವ್ರ ಶೋಧ ನಡೆಸಿದಾಗ ಅಡಗು ತಾಣವೊಂದು ಪತ್ತೆಯಾಯಿತು. ಅಲ್ಲಿಉಗ್ರರು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ಸಂಗ್ರಹಿಸಿಟ್ಟಿದ್ದರು. ಅವುಗಳನ್ನು ವಶಪಡಿಸಿಕೊಂಡ ಯೋಧರು ನಂತರ ಆ ರಹಸ್ಯತಾಣವನ್ನು ಸ್ಫೋಟಗೊಳಿಸಿ ಧ್ವಂಸ ಮಾಡಿದರು.

ಗುಂಡಿನ ಚಕಮಕಿ ವೇಳೆ ಇನ್ನೂ ಕೆಲವು ಉಗ್ರರು ಗುಂಡೇಟಿನಿಂದ ಗಾಯಗೊಂಡಿರುವ ಸಾಧ್ಯತೆ ಇದ್ದು, ತೀವ್ರ ಶೋಧ ಮುಂದುವರೆದಿದೆ. ಭದ್ರತಾ ಪಡೆಗಳು ನಿನ್ನೆಯಷ್ಟೇ ಬಾರಾಮುಲ್ಲಾಜಿಲ್ಲೆಯಲ್ಲಿಇಬ್ಬರುಉಗ್ರರನ್ನು ಹೊಡೆದುರುಳಿಸಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು.

ಕಳೆದ ಕೆಲವು ದಿನಗಳಿಂದ ಶೋಫಿಯಾನ್, ಬಾರಾಮುಲ್ಲಾ, ಪುಲ್ವಾಮಾ, ಕುಲ್ಗಂ ಸೇರಿದಂತೆ ವಿವಿಧೆಡೆ ಯೋಧರು ಉಗ್ರರನ್ನು ಎನ್‍ಕೌಂಟರ್‍ನಲ್ಲಿ ನಿಗ್ರಹಿಸುತ್ತಿದ್ದಾರೆ. ಭಯೋತ್ಪಾದಕರ ದಮನ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ