ಬೆಂಗಳೂರು, ಜೂ. 23- ಡಾ. ಶಾಮ್ ಪ್ರಸಾದ್ ಮುಖರ್ಜಿ ಅವರಿಗೆ ಕಾಂಗ್ರೆಸ್ ಎಲ್ಲ ಸಂದರ್ಭದಲ್ಲೂ ಅನ್ಯಾಯವೆಸಗಿತ್ತು.ನೆಹರು ಅವರಿಗೆ ಪರ್ಯಾಯ ನಾಯಕರಾಗಿ ಹೊರಹೊಮ್ಮಿದ ಅವರನ್ನು ತುಳಿಯುವ ಪ್ರಯತ್ನ ಮಾಡಲಾಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಡಾ. ಶಾಮ್ ಪ್ರಸಾದ್ ಮುಖರ್ಜಿ ಬಲಿದಾನ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಸರ್ದಾರ್ ವಲ್ಲಬ್ ಬಾಯ್ ಪಟೇಲ್ ರೀತಿಯಲ್ಲೆ ಕಾಂಗ್ರೆಸ್ನಿಂದ ಮುಖರ್ಜಿ ಅವರಿಗೂ ಅನ್ಯಾಯವಾಗಿತ್ತು ಎಂದರು.
ಶಾಮ್ ಪ್ರಸಾದ್ ಮುಖರ್ಜಿ ಅವರ ಅನುಮಾಸ್ಪದ ಸಾವಿನ ತನಿಖೆಯನ್ನು ಸಹ ಕಾಂಗ್ರೆಸ್ ಸರ್ಕಾರ ಮಾಡಲಿಲ್ಲ, ಕಾಂಗ್ರೆಸ್ಗೆ ಪರ್ಯಾಯವಾದ ರಾಜಕೀಯ ಪಕ್ಷವನ್ನು ಕಟ್ಟಿದ ಮುಖರ್ಜಿ ಅವರು ಉತ್ತಮ ಕೆಲಸಗಾರರು ಎಂದರು. ಅವರ ಜೀವನ-ಸಾಧನೆ ಎಲ್ಲ ಕಾರ್ಯಕರ್ತರಿಗೂ ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಜಮ್ಮುಕಾಶ್ಮೀರಕ್ಕೆ ಆರ್ಟಿಕಲ್ 370ರ ಅಡಿಯಲ್ಲಿ ನೀಡಿರುವ ವಿಶೇಷ ಸ್ಥಾನಮಾನ ರದ್ದು ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಕಾಯ್ರ್ಮೋಖರಾಗಿದ್ದಾರೆ. ಅಲ್ಲಿ ಬದಲಾವಣೆಯ ಗಾಳಿ ಬೀಸುವಂತೆ ಮಾಡಲು ಮುಂದಾಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ಬರ ಪರಿಹಾರ ಕಾಮಗಾರಿಗಳ ಬಗ್ಗೆ ಗಮನಹರಿಸುವುದನ್ನು ಬಿಟ್ಟು ಪ್ರತಿಪಕ್ಷದ ನಾಯಕರು ಏಲ್ಲಿ ಹೋಗುತ್ತಾರೆ?ಏನು ಮಾಡುತ್ತಿದ್ದಾರೆ ಎಂದು ಗಮನಿಸುತ್ತಿದ್ದಾರೆ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಬರ ಸಮೀಕ್ಷೆಗೆ ಹೋದಾಗ ಉತ್ತಮ ಕೆಲಸ ಮಾಡಿದ ಅಧಿಕಾರಗಳನ್ನು ಪ್ರಶಂಸಿದ್ದೇನೆ. ಎಲ್ಲಿ ಸರಿಯಾಗಿ ಕೆಲಸ ನಡೆದಿಲ್ಲವೋ, ಅಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದೇನೆ ಎಂದರು.
ತುಮಕೂರಿನಲ್ಲಿ ಪರಮೇಶ್ವರ್ ತೆರಳುವ ಮಾರ್ಗ ಮಧ್ಯೆ ಮನೆಯ ಮೇಲೆ ಬಿಜೆಪಿ ಧ್ವಜ ಕಟ್ಟಿದವರಿಗೆ ನೋಟಿಸ್ ನೀಡಿದ್ದಾರೆ ಎಂಬ ವರದಿಯನ್ನು ಗಮನಿಸಿದ್ದೇನೆ. ಈ ಬಗ್ಗೆ ಪೂರ್ಣ ಮಾಹಿತಿ ಪಡೆಯುತ್ತೇನೆ. ಒಂದು ರಾಷ್ಟ್ರೀಯ ಪಕ್ಷದ ಧ್ವಜವನ್ನು ಪ್ರದರ್ಶಿಸಬಾರದು ಎಂದರೆ ಅದು ತಪ್ಪಾಗುತ್ತದೆ. ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಲಿಂಗನಮಕ್ಕಿ ಜಲಾಶಯದಿಂದ ನೀರು ತರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಶಿವಮೊಗ್ಗದ ಜನ ಹೋರಾಟ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಈ ಯೋಜನೆಗೆ ಡಿಪಿಆರ್ ಮಾಡಲು ಹೊರಟಿರುವುದು ಸರಿಯಾದ ಕ್ರಮವಲ್ಲ, ಡಿಪಿಆರ್ ಮಾಡುವುದನ್ನು ಕೈ ಬಿಟ್ಟು ವಾಸ್ತವಾಂಶದ ಆಧಾರದ ಮೇಲೆ ಬೆಂಗಳೂರಿಗೆ ನೀರು ತರುವ ಯೋಜನೆಯನ್ನು ರೂಪಿಸಲಿ ಎಂದು ಹೇಳಿದರು.
ಮಾಜಿ ಸಚಿವ ಗೋವಿಂದ್ ಕಾರಜೋಳ ಮಾತನಾಡಿ, ಬಿಜೆಪಿಯ ಒಬ್ಬರು ಸ್ವಾತಂತ್ರ ಹೋರಾಟದಲ್ಲಿ ತ್ಯಾಗ, ಬಲಿದಾನ ಮಾಡಿಲ್ಲ ಎಂದು ಕೆಲವು ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ. ಇಂತಹ ಟೀಕೆ ಮಾಡಿದ ನಾಯಕರ ಕುಟುಂಬದಲ್ಲಿ ಎಷ್ಟು ಜನ ದೇಶದ ಸ್ವಾತಂತ್ರಕ್ಕೆ ಹೋರಾಟ ನಡೆಸಿದ್ದಾರೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನವರು ಅಸ್ಪೃಷ್ಯತೆಯನ್ನು ಜೀವಂತವಾಗಿಟ್ಟು, ದಲಿತರನ್ನು ವೋಟ್ ಬ್ಯಾಂಕ್ ಮಾಡಿಕೊಂಡರು, ಆದರೆ ಆರ್ಎಸ್ಎಸ್, ಸಂಘ ಪರಿವಾರ ಮತ್ತು ಬಿಜೆಪಿ ದೀನದಲಿತರ ಏಳಿಗೆಗೆ ಶ್ರಮಿಸುತ್ತಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗಾಗಿ ಕಾರ್ಖಾನೆಗಳಿಗೆ ಕಡಿಮೆ ಬಡ್ಡಿಗೆ 6ಸಾವಿರ ಕೋಟಿ ರೂ.ಸಾಲ ನೀಡಿದೆ.ಆದರೆ ಸಕ್ಕರೆ ಕಾರ್ಖಾನೆ ಮಾಲೀಕರು ಮಾತ್ರ ಸ್ಪಂದಿಸುತ್ತಿಲ್ಲ. ರಾಜ್ಯ ಸರ್ಕಾರ ಕೂಡ ಕೈ ಕಟ್ಟಿ ಕುಳಿತಿದೆ ಎಂದು ಆರೋಪಿಸಿದರು.