![dharmendra-pradhan-oil](http://kannada.vartamitra.com/wp-content/uploads/2019/06/dharmendra-pradhan-oil-678x381.jpg)
ನವ ದೆಹಲಿ: ಅಮೆರಿಕದ ಡ್ರೋನ್ಗಳನ್ನು ಇರಾನ್ ಹೊಡೆದುರುಳಿಸಿರುವುದಕ್ಕೆ ಸಂಬಂಧಿಸಿದಂತೆ ಯುಎಸ್-ಇರಾನ್ ನಡುವಿನ ಇತ್ತೀಚಿನ ಬೆಳವಣಿಗೆಗಳಿಂದಾಗಿ ತೈಲ ಬೆಲೆ ತೀವ್ರವಾಗಿ ಏರಿಕೆಯಾಗುವ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ತೈಲ ಬೆಲೆ ತೀವ್ರವಾಗಿ ಏರಿಕೆಯಾಗುವ ಹಿನ್ನೆಲೆಯಲ್ಲಿ, ತೈಲ ಬೆಲೆಗಳನ್ನು ನಿಯಂತ್ರಿಸುವಲ್ಲಿ ಸಕ್ರಿಯ ಪಾತ್ರ ವಹಿಸುವಂತೆ ಭಾರತವು ಒಪೆಕ್ ಮುಖ್ಯ ಸದಸ್ಯ ಸೌದಿ ಅರೇಬಿಯಾವನ್ನು ಕೇಳಿದೆ. ಬ್ರೆಂಟ್ ಕಚ್ಚಾ ತೈಲ ಬೆಲೆ ಗುರುವಾರ ಶೇ. 5 ರಷ್ಟು ಏರಿಕೆಯಾಗಿದ್ದು, ಇದು ಜನವರಿಯ ನಂತರದ ಗರಿಷ್ಠ ದರವಾಗಿದೆ.
ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರಸ್ತುತ ಪ್ರತಿ ಬ್ಯಾರೆಲ್ ಮಟ್ಟಕ್ಕೆ $ 65 ಆಗಿದೆ. ವಿಶೇಷವೆಂದರೆ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ಕಠಿಣ ನಿಲುವನ್ನು ತೆಗೆದುಕೊಂಡ ನಂತರ ಹಾರ್ಮುಜ್ ಜಲಸಂಧಿ ಕೇಂದ್ರದಲ್ಲಿ ಇರಾನಿನ ಪಡೆಗಳು ಯುಎಸ್ ನೌಕಾಪಡೆಯ ಡ್ರೋನ್ ಅನ್ನು ಹೊಡೆದುರುಳಿಸಿದ ನಂತರ, ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸೌದಿ ಪೆಟ್ರೋಲಿಯಂ ಸಚಿವ ಖಾಲಿದ್ ಅಲ್ ಫ್ಲೀಹ್ ಅವರೊಂದಿಗೆ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದಾರೆ.
“ಹಾರ್ಮುಜ್ ಸ್ಟ್ರೈಟ್ಸ್ ಕೇಂದ್ರದ ಘಟನೆಯು ಕಳವಳಕಾರಿಯಾಗಿದೆ, ಇದು ತೈಲ ಬೆಲೆ ಏರಿಕೆಗೆ ಕಾರಣವಾಗಿದೆ” ಎಂದು ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿದ್ದಾರೆ.
ತೈಲ ಬೆಲೆಗಳಲ್ಲಿನ ಏರಿಳಿತದ ಬಗ್ಗೆ ಭಾರತೀಯ ಗ್ರಾಹಕರ ಸೂಕ್ಷ್ಮತೆಯನ್ನು ಉಲ್ಲೇಖಿಸಿರುವ ಅವರು, ‘ಸೌದಿ ಅರೇಬಿಯಾದ ಇಂಧನ, ಕೈಗಾರಿಕೆ ಮತ್ತು ಖನಿಜ ಸಂಪನ್ಮೂಲ ಸಚಿವ ಖಾಲಿದ್ ಅಲ್ ಫಲಿಹ್ ಅವರಿಂದ ದೂರವಾಣಿ ಮಾತುಕತೆ ನಡೆಸಲಾಗಿದೆ. ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ಕಾರ್ಯತಂತ್ರದ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಲು, ಹೈಡ್ರೋಕಾರ್ಬನ್ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸಲು ಚರ್ಚಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಭಾರತವು ತನ್ನ ಪೆಟ್ರೋಲಿಯಂ ಅಗತ್ಯಗಳಿಗಾಗಿ ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿದೆ ಮತ್ತು ಕಚ್ಚಾ ಬೆಲೆಗಳ ಏರಿಕೆಯು ಆರ್ಥಿಕ ಸವಾಲುಗಳನ್ನು ಹೆಚ್ಚಿಸುತ್ತದೆ. ಜೂನ್ ಆರಂಭದಲ್ಲಿ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಸೀಮಿತ ವ್ಯಾಪ್ತಿಯಲ್ಲಿವೆ. ಈ ಕಾರಣದಿಂದಾಗಿ, ಭಾರತದಲ್ಲಿ ತೈಲ ಬೆಲೆಯಲ್ಲಿ ಇಳಿಕೆ ಮಾಡಲಾಗಿತ್ತು. ಆದರೆ ಈಗ ಮತ್ತೆ ತೈಲ ಬೆಲೆಗಳು ಏರುತ್ತಿವೆ.