ಬೆಂಗಳೂರು,ಜೂ.22- ಮಳೆಯ ಕಾರಣದಿಂದಾಗಿ ಕಲಬುರಗಿ ಜಿಲ್ಲೆಯ ಅಫ್ಜಲ್‍ಪುರ ತಾಲ್ಲೂಕಿನ ಹೆರೂರ್(ಬಿ) ಗ್ರಾಮದಲ್ಲಿ ನಡೆಯಬೇಕಿದ್ದ ಜನತಾದರ್ಶನ ಮತ್ತು ಗ್ರಾಮವಾಸ್ತವ್ಯವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದೂಡಿದ್ದಾರೆ.
ನಿನ್ನೆ ಯಾದಗಿರಿ ಜಿಲ್ಲೆ ಗುರುಮಿಟ್ಕಲ್ ತಾಲ್ಲೂಕಿನ ಚಂಡರಕಿ ಗ್ರಾಮದಲ್ಲಿ ಜನತಾದರ್ಶನ ನಡೆಸಿ ಗ್ರಾಮವಾಸ್ತವ್ಯ ಮಾಡಿದ್ದ ಮುಖ್ಯಮಂತ್ರಿಗಳು ಇಂದು ಹೆರೂರ್(ಬಿ) ಗ್ರಾಮದಲ್ಲಿ ಜನತಾದರ್ಶನ ಮಾಡಿ ಗ್ರಾಮವಾಸ್ತವ್ಯ ಮಾಡಬೇಕಿತ್ತು. ಆದರೆ ನಿನ್ನೆ ಸಂಜೆ ಮತ್ತು ರಾತ್ರಿ ಮಳೆ ಸುರಿದಿದ್ದರಿಂದ ಗ್ರಾಮವಾಸ್ತವ್ಯ ಮತ್ತು ಜನತಾದರ್ಶನ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ.
ನಿನ್ನೆ ತಡರಾತ್ರಿವರೆಗೂ ಸಮಾಜ ಕಲ್ಯಾಣ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಜಿಲ್ಲಾಧಿಕಾರಿ ವೆಂಕಟೇಶ್ ಅವರ ಚರ್ಚೆ ಮಾಡಿ ಕಾರ್ಯಕ್ರಮವನ್ನು ಮುಂದೂಡು ನಿರ್ಣಯ ತೆಗೆದುಕೊಂಡಿದ್ದಾರೆ.
ಉತ್ತಮ ಮಳೆಯಾಗಿರುವುದರಿಂದ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅನುಕೂಲವಾಗಲಿದೆ ಎಂಬ ಸಮಾಧಾನವಿದೆ. ಚಂಡರಕಿ ಗ್ರಾಮದ ಗ್ರಾಮವಾಸ್ತವ್ಯ-ಜನತಾದರ್ಶನ ಎರಡೂ ಯಶಸ್ವಿಯಾಗಿವೆ. ಸಾಧ್ಯವಾದಷ್ಟು ಎಲ್ಲ ಸಮಸ್ಯೆಗಳಿಗೂ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದೇನೆ.
ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಹೊರತುಪಡಿಸಿ ಎಲ್ಲ ಅರ್ಜಿಗಳಿಗೂ ಗ್ರಾಮವಾಸ್ತವ್ಯದಲ್ಲೇ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜುಲೈ ತಿಂಗಳಿನಲ್ಲಿ ವಿಧಾನಮಂಡಲದ ಅಧಿವೇಶನ ನಡೆಯಲಿದ್ದು, ಅದರ ನಂತರ ಮತ್ತೆ ಗ್ರಾಮವಾಸ್ತವ್ಯ-ಜನತಾದರ್ಶನದ ಕಾರ್ಯಕ್ರಮಗಳ ದಿನಾಂಕವನ್ನು ಪ್ರಕಟಿಸಲಾಗುತ್ತದೆ. ಹೆರೂರ್(ಬಿ) ಗ್ರಾಮದ ಜನತಾದರ್ಶನವನ್ನು ಅನಿವಾರ್ಯವಾಗಿ ಮುಂದೂಡಬೇಕಾಗಿರುವುದು ನನಗೆ ನಿರಾಶೆ ಉಂಟುಮಾಡಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಅದನ್ನು ಸರಿಯಾಗಿ ಬಳಕೆ ಮಾಡಿಕೊಂಡಿಲ್ಲ. ಈಗ ಬಿಡುಗಡೆ ಮಾಡಿರುವ ಅನುದಾನದ ಜೊತೆ ಅಗತ್ಯಬಿದ್ದರೆ ಇನ್ನು 500 ಕೋಟಿ ಹೆಚ್ಚುವರಿಯಾಗಿ ನೀಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.
ಸರಳತೆ ಮೆರೆದ ಸಿಎಂ:
ಚಂಡರಕಿ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಮಾಡಿದ್ದ ಮುಖ್ಯಮಂತ್ರಿಗಳು ನಿನ್ನೆ ತಡರಾತ್ರಿಯವರೆಗೂ ಸಾರ್ವಜನಿಕರ ಅಹವಾಲುಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರ ಒದಗಿಸುವ ಪ್ರಯತ್ನ ಮಾಡಿದರು.
ಪಿಂಚಣಿ, ಮನೆ, ಮಾಶಾಸನದಂತಹ ಅರ್ಜಿಗಳನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಇಂತಹ ಸಮಸ್ಯೆಗಳು ನನ್ನವರೆಗೂ ಬರಬಾರದು. ತಾಲ್ಲೂಕು ಮಟ್ಟದಲ್ಲೇ ಬಗೆಹರಿಯಬೇಕು. ಆದರೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದಿರುವುದರಿಂದ ಜನ ಸಂಕಟಷ್ಟಕ್ಕೀಡಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿನ್ನೆ ರಾತ್ರಿ ಬಿಳಿ ಜೋಳದ ರೊಟ್ಟಿ, ಪಲ್ಯ, ಉಪ್ಪಿನಕಾಯಿ ಪದಾರ್ಥಗಳಿರುವ ಸರಳ ಊಟ ಮಾಡಿದ ಸಿಎಂ, ಸರ್ಕಾರಿ ಶಾಲೆಯ ಕೊಠಡಿಯಲ್ಲಿ ಚಾಪೆಯ ಮೇಲೆ ಮಲಗುವ ಮೂಲಕ ಸರಳತೆ ಮೆರೆದರು.
ಇಂದು ಬೆಳಗ್ಗೆ 6 ಗಂಟೆಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ಕಾಫಿ ಸೇವಿಸಿ ನಂತರ ಪತ್ರಿಕೆಗಳನ್ನು ಓದಿದರು.ನಿನ್ನೆ ಭೇಟಿಗೆ ಸಾಧ್ಯವಾಗದೆ ಇದ್ದ ಬಹಳಷ್ಟು ಮಂದಿ ಸಾರ್ವಜನಿಕರು ಇಂದು ಬೆಳಗ್ಗೆ ಕೂಡ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದರು.ಅವರ ಅಹವಾಲುಗಳನ್ನು ಸಮಾಧಾನದಿಂದ ಆಲಿಸಿದ ಮುಖ್ಯಮಂತ್ರಿ ಹಲವು ಸಲಹೆಗಳನ್ನು ಸೂಚಿಸಿದರು.ನಂತರ ಹೈದರಾಬಾದ್‍ಗೆ ತೆರಳಿ ಅಲ್ಲಿಂದ ಏರ್‍ಪೆÇೀರ್ಟ್ ಮೂಲಕ ಬೆಂಗಳೂರಿಗೆ ಮರಳಿದರು.
12 ವರ್ಷಗಳ ನಂತರ ಪುನರಾರಂಭಗೊಂಡ ಮುಖ್ಯಮಂತ್ರಿಗಳ ಜನತಾದರ್ಶನ ಅತ್ಯಂತ ಯಶಸ್ವಿಯಾಗಿ ನಡೆದಿದ್ದಲ್ಲದೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ದೊರಕಿಸಿಕೊಟ್ಟಿತ್ತು.