![HDD-1](http://kannada.vartamitra.com/wp-content/uploads/2019/06/HDD-1-678x372.jpg)
ಬೆಂಗಳೂರು: ಇಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರು ಕೂಡ ಯೋಗಾಸನ ಮಾಡಿದ್ದಾರೆ. ಪದ್ಮನಾಭ ನಗರದ ನಿವಾಸದಲ್ಲಿ ಯೋಗ ಅಭ್ಯಾಸ ಮಾಡಿದ್ದು, ಯಾರ ಸಹಾಯವೂ ಇಲ್ಲದೇ ಈ ವಯಸ್ಸಿನಲ್ಲಿಯೂ ಹಲವು ಭಂಗಿಗಳಲ್ಲಿ ಯೋಗಾಸನ ಮಾಡಿದ್ದಾರೆ.
ಇದೇ ವೇಳೆ ಮಾತನಾಡಿದ ಮಾಜಿ ಪ್ರಧಾನಿ, ಯೋಗವನ್ನು ಪ್ರಾಚೀನ ಕಾಲದಿಂದಲೂ ಋಷಿ-ಮುನಿಗಳು ಮಾಡುತ್ತಿದ್ದಾರೆ. ನಾನು ವಿದ್ಯಾರ್ಥಿಯಾಗಿದ್ದಾಗ ಸೂರ್ಯ ನಮಸ್ಕಾರ ಮಾಡುತ್ತಿದ್ದೆ. ಅದು ಆರೋಗ್ಯಕ್ಕೆ ಒಳ್ಳೆಯದು, ಮಹಾತ್ಮ ಗಾಂಧೀಜಿಯವರು ಯೋಗದ ಮಹತ್ವ ಸಾರಿದ್ದರು. ನರೇಂದ್ರ ಮೋದಿಯವರು ಹೆಚ್ಚು ಯೋಗಕ್ಕೆ ದೇಶವಿದೇಶಗಳಲ್ಲಿ ಹೆಚ್ಚು ಪ್ರಚಾರ ಮಾಡಿದ್ದರು. ಹೀಗಾಗಿ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜಕಾರಣದಲ್ಲಿ ಅನೇಕ ಏಳು ಬೀಳು ಇರುತ್ತೆ. ನನ್ನ ಜೊತೆಯಲ್ಲೇ ಇದ್ದು ಬೆಳೆದವರು ನನ್ನನ್ನು ಬಿಟ್ಟು ಹೋಗಿದ್ದಾರೆ. ಆದರೆ ನಾನು ಧೃತಿಗೆಡದೆ ಮುಂದೆ ಬಂದಿದ್ದೇನೆ. ಮೈತ್ರಿ ಸರ್ಕಾರ ಮಾಡಲೇಬೇಕು ಅಂತ ನಂಗೇನು ಇರಲಿಲ್ಲ. ದೆಹಲಿ ನಾಯಕರು ಬಂದು ನಿಮ್ಮ ಮಗನನ್ನ ಮುಖ್ಯಮಂತ್ರಿ ಮಾಡಬೇಕು ಎಂದು ಹೇಳಿದ್ದರು. ಆದರೆ ಈಗ ಸಾರ್ವತ್ರಿಕ ಚುನಾವಣೆ ನಂತರ ಹೈಕಮಾಂಡ್ ಸ್ವಲ್ಪ ಶಕ್ತಿ ಕಳೆದುಕೊಂಡಿದೆ. ಸರ್ಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ. ಅದು ಕಾಂಗ್ರೆಸ್ ಮುಖಂಡರ ಕೈಯಲ್ಲಿ ಇದೆ. ಜೆಡಿಎಸ್ ಜೊತೆ ಹೊರಟರೆ ಕಾಂಗ್ರೆಸ್ ಪಕ್ಷ ಹೋಗುತ್ತೆ ಅನ್ನೋ ಸಂಕಟ ಇದೆ. ಹೀಗಾಗಿ ನಮ್ಮ ಮಂತ್ರಿ ಸ್ಥಾನವನ್ನೂ ತೆಗೆದುಕೊಂಡಿದ್ದಾರೆ. ಎಲ್ಲ ಸಹಿಸಿಕೊಂಡು ಹೋಗುತ್ತಿದ್ದೇನೆ ಎಂದು ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾಲಿ ಸಂಸದರಿರುವ ಕ್ಷೇತ್ರ ನಮಗೆ ಬೇಡ ಎಂದಿದ್ದೆ. ತುಮಕೂರು ಕ್ಷೇತ್ರವನ್ನು ನಾವು ಕೇಳಲೇ ಇಲ್ಲ. ಆದರೂ ಆ ಕ್ಷೇತ್ರವನ್ನೇ ಕೊಟ್ಟಿದ್ದರು. ನಾವು ಕಾಂಗ್ರೆಸ್ ಸೋತಿರುವ ಕ್ಷೇತ್ರವನ್ನೇ ಕೊಡಿ ಎಂದು ಕೇಳಿದ್ವಿ. ಆದರೆ ಮೈಸೂರಿಗೋಸ್ಕರ ತುಮಕೂರು ಕ್ಷೇತ್ರ ಕೊಟ್ಟರು ಎಂದು ಕಾಂಗ್ರೆಸ್ ವಿರುದ್ಧ ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದರು.