ಆಪರೇಷನ್ ಕಮಲಕ್ಕೆ ಕೇಂದ್ರ ಬಿಜೆಪಿ ನಾಯಕರಿಂದ ಗ್ರೀನ್ ಸಿಗ್ನಲ್

ಬೆಂಗಳೂರು, ಜೂ.20- ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ದೋಸ್ತಿ ಸರ್ಕಾರವನ್ನು ಅಸ್ಥಿರಗೊಳಿಸುವ ಆಪರೇಷನ್ ಕಮಲಕ್ಕೆ ಕೇಂದ್ರ ಬಿಜೆಪಿ ನಾಯಕರಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಯಾವುದೇ ವೇಳೆ ರಾಜ್ಯ ರಾಜಕೀಯದಲ್ಲಿ ಮಹತ್ವದ ವಿದ್ಯಮಾನಗಳು ಜರುಗುವ ಸಂಭವವಿದೆ.

ಈವರೆಗೂ ದೋಸ್ತಿ ಸರ್ಕಾರ ತಾನಾಗಿಯೇ ಬಿದ್ದುಹೋಗಲಿ ಎಂದು ಕಾಯುತ್ತಿದ್ದ ಬಿಜೆಪಿ ನಾಯಕರು ಭವಿಷ್ಯದ ದೃಷ್ಟಿಯಿಂದ ಎರಡೂ ಪಕ್ಷಗಳಲ್ಲಿ ಅಸಮಾಧಾನಗೊಂಡಿರುವ ಶಾಸಕರು ಬಂದರೆ ಬರಲಿ ನಮ್ಮದೇನು ಅಭ್ಯಂತರವಿಲ್ಲ ಎಂಬ ಭರವಸೆ ಕೊಟ್ಟಿದ್ದಾರೆ.

ಹೀಗಾಗಿಯೇ ತೆರೆಮರೆಯಲ್ಲಿ ಮತ್ತೆ ಆಪರೇಷನ್ ಕಮಲ ಆರಂಭವಾಗಿದ್ದು, ಈ ಬಾರಿ ಸಚಿವ ಸ್ಥಾನ ಮತ್ತು ಸೂಕ್ತ ಸ್ಥಾನಮಾನ ಸಿಗದೆ ಅಸಮಾಧಾನಗೊಂಡಿರುವ 20 ರಿಂದ 25 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ.

ಇದಕ್ಕೆ ಮುನ್ನುಡಿ ಎಂಬಂತೆ ನಾಲ್ಕು ದಿನಗಳ ಹಿಂದೆ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಮನೆಯಲ್ಲಿ ಕೆಲ ಕಾಂಗ್ರೆಸ್ ಶಾಸಕರು ಸಭೆ ಸೇರಿ ಮುಂದಿನ ಬೆಳವಣಿಗೆಗಳ ಕುರಿತು ಮಾತುಕತೆ ನಡೆಸಿದ್ದರು. ಇದರ ನಡುವೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಎಚ್.ವಿಶ್ವನಾಥ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಭೇಟಿಯಾಗಿ ಚರ್ಚೆ ನಡೆಸಿದ್ದರು.

ಇದಕ್ಕೂ ಮುನ್ನ ವಿಶ್ವನಾಥ್ ಮಾಜಿ ಸಚಿವ, ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಜತೆಯೂ ಮೈಸೂರು ಮತ್ತು ಬೆಂಗಳೂರಿನಲ್ಲಿ ಮಾತುಕತೆ ನಡೆಸಿದ್ದು, ನಾನಾ ಸಂಶಯಗಳಿಗೆ ಎಡೆಮಾಡಿಕೊಟ್ಟಿತ್ತು.

ಕಳೆದ ವಾರ ನವದೆಹಲಿಗೆ ತೆರಳಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿಯಾದ ವೇಳೆ ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದ್ದರು.

ಈ ಹಿಂದೆ ಇದೇ ಅಮಿತ್ ಷಾ ಅವರು ದೋಸ್ತಿ ನಾಯಕರೇ ಹಾದಿಬೀದಿಯಲ್ಲಿ ಕಿತ್ತಾಡಿಕೊಳ್ಳುತ್ತಿದ್ದಾರೆ. ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡ ಪರಿಣಾಮ ಲೋಕಸಭೆ ಚುನಾವಣೆಯಲ್ಲಿ ಯಾವ ಫಲಿತಾಂಶ ಬಂದಿದೆ ಎಂಬುದು ನಮಗೂ ಗೊತ್ತಿದೆ. ಈ ಸರ್ಕಾರ ಮುಂದುವರಿಯುವುದು ಖುದ್ದು ಸಿದ್ದರಾಮಯ್ಯನವರಿಗೆ ಇಷ್ಟವಿಲ್ಲ. ಏನಾಗುತ್ತದೆ ಕಾಯೋಣ. ಕೆಲ ದಿನಗಳ ಮಟ್ಟಿಗೆ ಸಹನೆಯಿಂದ ಇರಬೇಕೆಂದು ಅಮಿತ್ ಷಾ ಬಿಎಸ್‍ವೈ ಸೇರಿದಂತೆ ರಾಜ್ಯ ನಾಯಕರಿಗೆ ನೀತಿಪಾಠ ಹೇಳಿದ್ದರು.

ಇದೀಗ ಎರಡೂ ಪಕ್ಷಗಳಿಂದ ಅಸಮಾಧಾನಗೊಂಡಿರುವ ಶಾಸಕರೇ ಬಿಜೆಪಿಗೆ ಬರಲು ಮುಂದಾಗಿರುವಾಗ ವಿಳಂಬ ಮಾಡದೆ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಟ್ಟು ಜಾಗರೂಕತೆಯಿಂದ ಪರಿಸ್ಥಿತಿ ನಿಭಾಯಿಸಬೇಕೆಂದು ಸೂಚನೆ ಕೊಡಲಾಗಿದೆ.

ಸಚ್ಚಾರಿತ್ರ್ಯವಿರಲಿ: ಕೇವಲ ಅಧಿಕಾರದ ಆಸೆ, ಆಮಿಷಗಳಿಗೆ ಬಾರದೆ ಪಕ್ಷದ ಸಿದ್ಧಾಂತ, ನರೇಂದ್ರ ಮೋದಿ ನಾಯಕತ್ವ ಹಾಗೂ ಸಮಾಜದಲ್ಲಿ ತನ್ನದೇ ಆದ ಆತ್ಮಗೌರವ ಇಟ್ಟುಕೊಂಡಿರುವವರನ್ನು ಮಾತ್ರ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ.

ಹಣದ ಆಸೆ, ಮಂತ್ರಿಸ್ಥಾನಕ್ಕೆ ಲಾಬಿ ಮಾಡುವವರು ಪಕ್ಷಕ್ಕೆ ಬರುವುದೇ ಬೇಡ. ಅಂತಹವರಿಂದ ಪಕ್ಷಕ್ಕೂ ಹಾನಿಯಾಗುತ್ತದೆ. ಕನಿಷ್ಟ ಕರ್ನಾಟಕದಲ್ಲಿ ಎರಡು ಬಾರಿ ಸರ್ಕಾರ ರಚನೆ ಮಾಡುವಂತಹ ದೂರದೃಷ್ಟಿ ಇಟ್ಟುಕೊಂಡು ಮುಂದುವರಿಯಬೇಕೆಂದು ಹೈಕಮಾಂಡ್ ನಾಯಕರು ಸಲಹೆ ಮಾಡಿದ್ದಾರೆ.

ಬಂದವರು ನಾಳೆ ಬ್ಲಾಕ್‍ಮೇಲ್ ಮಾಡಬಾರದು. ಉಪಚುನಾವಣೆ ಎದುರಾದರೆ ಅವರನ್ನು ಗೆಲ್ಲಿಸುವ ಹೊಣೆಗಾರಿಕೆಯನ್ನು ಪಕ್ಷವೇ ವಹಿಸಿಕೊಳ್ಳುತ್ತದೆ. ನಾವು ಎಲ್ಲಿಯೂ ನೇರವಾಗಿ ಆಪರೇಷನ್ ಕಮಲದಲ್ಲಿ ಭಾಗಿಯಾಗುವುದಿಲ್ಲ. ಆದರೆ, ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸುತ್ತೇವೆ. ಸ್ಥಿರ ಮತ್ತು ಜನಪ್ರಿಯ ಆಡಳಿತ ನೀಡಬೇಕೆಂಬುದೇ ನಮ್ಮ ಗುರಿ ಎಂದು ಹೇಳಿದ್ದಾರೆ.

ಎರಡು ಡಜನ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ: ಈ ಬಾರಿಯ ಆಪರೇಷನ್ ಕಮಲಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್‍ನಿಂದ ಸುಮಾರು ಎರಡು ಡಜನ್‍ಗೂ ಅಧಿಕ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ.

ಲೋಕಸಭೆ ಚುನಾವಣೆಯಲ್ಲಿ ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ನೀಡಿದ ಶಾಸಕರೇ ಪಕ್ಷಕ್ಕೆ ಬರಲು ಸಿದ್ಧರಾಗಿದ್ದಾರೆ. ಇದರ ಸುಳಿವರಿತೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶಾಸಕರೊಬ್ಬರಿಗೆ ಬಿಜೆಪಿಗೆ ಬರುವಂತೆ 10 ಕೋಟಿ ಆಮಿಷವೊಡ್ಡಲಾಗಿದೆ ಎಂಬ ಬಾಂಬ್ ಸಿಡಿಸಿದ್ದರು.

ಜುಲೈ ಅಂತ್ಯದೊಳಗೆ ಬಹುತೇಕ ಎಲ್ಲ ಪ್ರಕ್ರಿಯೆಗಳೂ ಮುಗಿಯಬೇಕು. ಅಕ್ಟೋಬರ್, ನವೆಂಬರ್‍ನಲ್ಲಿ ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ. ಆ ರಾಜ್ಯಗಳಿಗೆ ಯಾವುದೇ ಕಾರಣಕ್ಕೂ ಕರ್ನಾಟಕದಿಂದ ಸಂಪನ್ಮೂಲ ಹೋಗದಂತೆ ತಡೆಗಟ್ಟುವುದು ಇದರ ಮೂಲ ಉದ್ದೇಶ ಎನ್ನಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ