ಬನ್ನೇರುಘಟ್ಟ ಮತ್ತು ಸರ್ಜಾಪುರ ರಸ್ತೆ ಅಗಲೀಕರಣದಲ್ಲಿ ಅವ್ಯವಹಾರ-ಪ್ರಕರಣವನ್ನು ಸಿಬಿಐ/ಸಿಐಡಿ ತನಿಖೆಗೆ ವಹಿಸಿ-ಎನ್.ಆರ್.ರಮೇಶ್

ಬೆಂಗಳೂರು, ಜೂ.20- ಬನ್ನೇರುಘಟ್ಟ ರಸ್ತೆ ಮತ್ತು ಸರ್ಜಾಪುರ ರಸ್ತೆ ಅಗಲೀಕರಣ ಕಾರ್ಯದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದ್ದು, ಈ ಪ್ರಕರಣವನ್ನು ಸಿಬಿಐ ಇಲ್ಲವೆ ಸಿಐಡಿ ತನಿಖೆಗೆ ವಹಿಸುವಂತೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದ್ದಾರೆ.

150 ಅಡಿಗಳಷ್ಟು ಅಗಲೀಕರಣ ಮಾಡಬೇಕಾದ ಈ ಎರಡು ಯೋಜನೆಗಳಿಗೆ ಸುಮಾರು 258 ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು. ಆದರೆ, ಈ ಮೊತ್ತದಲ್ಲಿ ಶೇ.75ರಷ್ಟು ವಂಚನೆಯಾಗಿದೆ. ಈ ಪ್ರಕರಣದಲ್ಲಿ ಬಿಬಿಎಂಪಿಯ ಪ್ರಭಾರಿ ಮುಖ್ಯ ಅಭಿಯಂತರ ಬಿ.ಎಸ್.ಪ್ರಹ್ಲಾದ್ ಸೇರಿದಂತೆ ಹಲವಾರು ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ರಮೇಶ್ ಪತ್ರಿಕಾಗೋಷ್ಠಿಯಲ್ಲಿಂದು ಗಂಭೀರ ಆರೋಪ ಮಾಡಿದರು.

ಬನ್ನೇರುಘಟ್ಟ ರಸ್ತೆಯ ಜೆಡಿ ಮರ ಜಂಕ್ಷನ್‍ನಿಂದ ಕೋಳಿಫಾರಂ ವೃತ್ತದವರೆಗಿನ 7.4ಕಿಮೀ ಉದ್ದದ ರಸ್ತೆ ಅಗಲೀಕರಣ ಕಾರ್ಯವನ್ನು ಆರ್‍ಕೆ ಇನ್ಫ್ರಾ ಕಾರ್ಪೊರೇಟ್ ಸಂಸ್ಥೆಗೆ 157.44 ಕೋಟಿ ರೂ. ಮೊತ್ತಕ್ಕೆ ಗುತ್ತಿಗೆ ನೀಡಲಾಗಿದೆ.

ಅದೇ ರೀತಿ ಸರ್ಜಾಪುರ ರಸ್ತೆಯ 4.74 ಕಿಮೀ ಉದ್ದದ ರಸ್ತೆ ಅಗಲೀಕರಣಕ್ಕೆ ಎನ್‍ಎಸ್ ನಾಯಕ್ ಸಂಸ್ಥೆಗೆ 100 ಕೋಟಿ ರೂ.ಗಳಿಗೆ ಗುತ್ತಿಗೆ ನೀಡಲಾಗಿದೆ.

ಬನ್ನೇರುಘಟ್ಟ ಮತ್ತು ಸರ್ಜಾಪುರ ರಸ್ತೆಗಳಲ್ಲಿನ ಅಧಿಕ ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ರಸ್ತೆ ಅಗಲೀಕರಣ ವಿಭಾಗದಿಂದ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.

ಕಳೆದ 2017ರಲ್ಲೇ ಎರಡೂ ರಸ್ತೆ ಅಗಲೀಕರಣಕ್ಕೆ ಟೆಂಡರ್ ಕರೆಯಲಾಗಿದ್ದು, ಆ ಸಂದರ್ಭದಲ್ಲಿ ಪ್ರಹ್ಲಾದ್ ಅವರು ರಸ್ತೆ ಮೂಲಭೂತ ಸೌಕರ್ಯ ಇಲಾಖೆಯ ಪ್ರಭಾರಿ ಮುಖ್ಯ ಅಭಿಯಂತರರಾಗಿದ್ದರು.

ಅವರ ಅವಧಿಯಲ್ಲಿ ಬನ್ನೇರುಘಟ್ಟ ರಸ್ತೆಯನ್ನು 18 ತಿಂಗಳೊಳಗೆ, ಸರ್ಜಾಪುರ ರಸ್ತೆಯನ್ನು 24 ತಿಂಗಳೊಳಗೆ ಪೂರ್ಣಗೊಳಿಸುವಂತೆ ಕಾರ್ಯಾದೇಶ ನೀಡಲಾಗಿತ್ತು. ಆದರೆ, ಈಗಾಗಲೇ ಕಾರ್ಯಾದೇಶ ನೀಡಿ 15 ತಿಂಗಳು ಕಳೆದಿದ್ದರೂ ಕಾಮಗಾರಿ ಪ್ರಗತಿಯಲ್ಲಿಲ್ಲ. ನಿಯಮದಂತೆ 150 ಅಡಿ ರಸ್ತೆ ಅಗಲೀಕರಣ ಮಾಡಬೇಕಿದೆ.

ನಾಲ್ಕು ಪಥಗಳ 25 ಮೀಟರ್‍ಗಳಷ್ಟು ಅಗಲದ ವಾಹನಗಳ ಸಂಚಾರ ರಸ್ತೆಯ ಎರಡೂ ಬದಿಗಳಲ್ಲಿ 7.5 ಮೀಟರ್ ಅಗಲದ ಸರ್ವೀಸ್ ರಸ್ತೆ, 1.5 ಮೀಟರ್ ಅಗಲದ ಪಾದಚಾರಿ ಮಾರ್ಗ ಹಾಗೂ 1 ಮೀಟರ್ ಅಗಲದ ಚರಂಡಿ ನಿರ್ಮಿಸುವ ಮೂಲಕ ರಾಷ್ಟ್ರೀಯ ಹೆದ್ದಾರಿ ಗುಣಮಟ್ಟದಂತೆ ರಸ್ತೆ ಅಗಲೀಕರಣ ಮಾಡಬೇಕಿರುತ್ತದೆ.

ಆದರೆ, 150 ಅಡಿಗಳಷ್ಟು ಅಗಲೀಕರಣ ಮಾಡಬೇಕಾದ ಈ ಎರಡೂ ರಸ್ತೆಗಳಲ್ಲಿ ಕೇವಲ 100 ಅಡಿಗಳಿಗಿಂತಲೂ ಕಡಿಮೆ ಅಗಲೀಕರಣ ಮಾಡಲಾಗಿದೆ. ಸರ್ವೀಸ್ ರಸ್ತೆ ನಿರ್ಮಿಸುವ ಯಾವ ಲಕ್ಷಣಗಳೂ ಕಾಣಸಿಗುತ್ತಿಲ್ಲ. ಹಳೆಯ ಚರಂಡಿಗಳನ್ನೇ ದುರಸ್ತಿ ಮಾಡಿ ಬಣ್ಣ ಬಳಿದು ಹೊಸದು ಎಂಬಂತೆ ಬಿಂಬಿಸಲಾಗುತ್ತಿದೆ.

ಒಟ್ಟಾರೆ ಇಡೀ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ. ಪಾದಚಾರಿ ಮಾರ್ಗಗಳನ್ನು ಕೆಲವೊಂದು ಕಡೆ ಮಾತ್ರ ಅಲ್ಪ ಪ್ರಮಾಣದಲ್ಲಿ ನಿರ್ಮಿಸಲಾಗಿದೆ.

ಈ ಮಹತ್ವದ ಯೋಜನೆಗಳನ್ನು ಆಂಧ್ರ ಮೂಲದ ಅರ್ಹತೆ ಇಲ್ಲದೆ ಆರ್‍ಕೆ ಇನ್ಫ್ರಾ ಸಂಸ್ಥೆಗೆ ಕಾನೂನು ಬಾಹಿರವಾಗಿ ಗುತ್ತಿಗೆ ನೀಡಲಾಗಿದೆ. ಈ ಎರಡೂ ರಸ್ತೆಗಳ ಬದಿಗಳಲ್ಲಿ ಖಾಲಿ ಜಾಗಗಳೇ ಇಲ್ಲ. ಹೊಸದಾಗಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಸರ್ವೀಸ್ ರಸ್ತೆ ನಿರ್ಮಿಸಲು ಯಾವುದೇ ಕಾರಣಕ್ಕೂ ಸಾಧ್ಯವಾಗುವುದಿಲ್ಲ.

ಇಷ್ಟೆಲ್ಲ ಲೋಪದೋಷಗಳು ಆಗಿರುವುದು ಪ್ರಹ್ಲಾದ್ ಅವರ ಮುಖ್ಯ ಅಭಿಯಂತರರಾಗಿದ್ದ ಸಂದರ್ಭದಲ್ಲೇ. ಕರಾರಿನಂತೆ ಕಾಮಗಾರಿ ಆಗುವಂತೆ ಎಚ್ಚರ ವಹಿಸುವುದು ಅವರ ಕರ್ತವ್ಯವಾಗಿರುತ್ತದೆ. ಆದರೆ, ಯೋಜನೆಯ 257 ಕೋಟಿ ರೂ.ಗಳಲ್ಲಿ ಶೇ.75ರಷ್ಟು ವಂಚನೆಯಾಗುತ್ತಿದ್ದರೂ ಪ್ರಹ್ಲಾದ್ ಅವರು ಕಣ್ಮುಚ್ಚಿ ಕುಳಿತಿದ್ದಾರೆ.

ಈ ಎರಡೂ ಯೋಜನೆಗಳಲ್ಲಿ 170 ಕೋಟಿಗೂ ಹೆಚ್ಚು ಹಣವನ್ನು ಲೂಟಿ ಮಾಡಲಾಗಿದೆ. ಪ್ರಹ್ಲಾದ್ ಒಬ್ಬರೇ ಕನಿಷ್ಠ 25 ಕೋಟಿ ಕಮಿಷನ್ ಪಡೆದಿರುವ ಸಾಧ್ಯತೆ ಇದೆ. ಈ ಹಿಂದೆ ಕೂಡ ಪ್ರಹ್ಲಾದ್ ಅವರ ವಿರುದ್ಧ ಅವ್ಯವಹಾರದ ಆರೋಪ ಕೇಳಿಬಂದಿತ್ತು. ಅಂದಿನ ಕಮಿಷನರ್ ಸಿದ್ದಯ್ಯ ಅವರು ಪ್ರಹ್ಲಾದ್ ಅವರನ್ನು ಅಮಾನತು ಕೂಡ ಮಾಡಿದ್ದರು.

ಇಷ್ಟೆಲ್ಲ ಆದರೂ ಮತ್ತೆ ತಮ್ಮ ರಾಜಕೀಯ ಪ್ರಭಾವ ಬಳಸಿ ನಿಯಮ ಬಾಹಿರವಾಗಿ ಮತ್ತೆ ಬಿಬಿಎಂಪಿಗೆ ವಕ್ಕರಿಸಿರುವ ಪ್ರಹ್ಲಾದ್ ಅವರು ಸಾಲು ಸಾಲು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಎನ್.ಆರ್.ರಮೇಶ್ ಅವರು 1123 ಪುಟಗಳ ದಾಖಲೆ ಬಿಡುಗಡೆ ಮಾಡಿ ತಪ್ಪಿತಸ್ಥರ ವಿರುದ್ಧ ಬೆಂಗಳೂರು ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್‍ಶಂಕರ್ ಅವರಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ