ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ಸಿದ್ದರಾಮಯ್ಯನವರಿಂದ ರಣತಂತ್ರ

ಬೆಂಗಳೂರು,ಜೂ.19-ರಾಜ್ಯ ಕಾಂಗ್ರೆಸ್‍ನಲ್ಲಿ ಪ್ರಶ್ನಾತೀತ ನಾಯಕರಾಗಿರುವ ಸಿದ್ದರಾಮಯ್ಯ ಅವರು ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ದೆಹಲಿಯಲ್ಲಿ ಹೈಕಮಾಂಡ್ ಜೊತೆ ಚರ್ಚಿಸಿ ರಣತಂತ್ರ ರೂಪಿಸುತ್ತಿದ್ದರೆ, ಇತ್ತ ಬೆಂಗಳೂರಿನಲ್ಲಿ ಅವರ ಪ್ರಭಾವ ಕುಗ್ಗಿಸಲು ವಿರೋಧಿ ಶಕ್ತಿಗಳ ಕ್ರೂಢೀಕರಣದ ಪ್ರಯತ್ನ ನಡೆಯುತ್ತಿವೆ.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಇಂದು ಕಾಂಗ್ರೆಸ್‍ನ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯನವರನ್ನು ವಿಶ್ವನಾಥ್ ಅವರೇ ಕಾಂಗ್ರೆಸ್‍ಗೆ ಕರೆತಂದಿದ್ದರು. ಆ ಸಂದರ್ಭದಲ್ಲಿ ಶ್ರೀನಿವಾಸಪ್ರಸಾದ್, ಎಚ್.ಸಿ.ಮಹದೇವಪ್ಪ ಮತ್ತಿತರರು ಸಾಥ್ ನೀಡಿದ್ದರು. ಕಾಲಕ್ರಮೇಣ ಸಿದ್ದರಾಮಯ್ಯನವರು ತಾವು ಕಾಂಗ್ರೆಸ್ ಸೇರಲು ಕಾರಣರಾದ ನಾಯಕರನ್ನೇ ಮೂಲೆಗುಂಪು ಮಾಡಿದರು.

ಸಿದ್ದರಾಮಯ್ಯನವರ ಮೇಲಿನ ಸಿಟ್ಟಿನಿಂದಾಗಿಯೇ ಶ್ರೀನಿವಾಸ್ ಪ್ರಸಾದ್ ಮತ್ತು ವಿಶ್ವನಾಥ್ ಪಕ್ಷ ಬಿಟ್ಟು ಹೋದರು. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಲು ವಿಫಲವಾದಾಗ ಸಿದ್ದರಾಮಯ್ಯನವರು ರಾಜಕೀಯವಾಗಿ ಹಿನ್ನಡೆ ಅನುಭವಿಸುತ್ತಾರೆ ಎಂಬ ಲೆಕ್ಕಾಚಾರಗಳಿದ್ದವು. ಆದರೆ ಸಮ್ಮಿಶ್ರ ಸರ್ಕಾರ ರಚನೆ ಮತ್ತು ಅದರ ನಿರ್ವಹಣೆಯಲ್ಲಿ ಸಿದ್ದರಾಮಯ್ಯನವರಿಗೆ ಮತ್ತೆ ಜವಾಬ್ದಾರಿಯುತ ಸ್ಥಾನ ಸಿಕ್ಕಿತು.

ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಆಯ್ಕೆಯಾದರು.ಜೆಡಿಎಸ್ ನಾಯಕರಿಗೆ ಬಿಸಿ ತುಪ್ಪವಾಗಿದ್ದರೂ ಸಿದ್ದರಾಮಯ್ಯ ಅವರನ್ನು ಸಹಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಈ ಸಂದರ್ಭದಲ್ಲಿ ಕಾಂಗ್ರೆಸ್‍ನಲ್ಲೇ ಪಳಗಿದ ಹಿರಿಯ ರಾಜಕಾರಣಿ ವಿಶ್ವನಾಥ್ ಅವರು ನೇರವಾಗಿ ಅಖಾಡಕ್ಕಿಳಿದಿದ್ದಾರೆ. ಸಿದ್ದರಾಮಯ್ಯ ಅವರಿಂದ ಸಂತ್ರಸ್ತರಾಗಿ ರಾಜಕೀಯ ಹಿನ್ನಡೆ ಅನುಭವಿಸಿದ ನಾಯಕರುಗಳನ್ನು ಭೇಟಿ ಮಾಡುತ್ತಿದ್ದಾರೆ.

ಶ್ರೀನಿವಾಸ್ ಪ್ರಸಾದ್ ಭೇಟಿಯ ಹಿಂದೆಯೂ ಸಿದ್ದರಾಮಯ್ಯನವರ ವಿರುದ್ಧ ರಾಜಕಾರಣ ಮಾಡುವ ಉದ್ದೇಶವಿತ್ತು. ಇಂದು ರಾಮಲಿಂಗಾರೆಡ್ಡಿ ಭೇಟಿಯ ಹಿಂದೆಯೂ ಇದೇ ಉದ್ದೇಶ ಇದೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಕಾಂಗ್ರೆಸ್‍ನ ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿ , ರೋಷನ್ ಬೇಗ್, ಎಚ್.ಕೆ.ಪಾಟೀಲ್ ಅವರು ಸಿದ್ದರಾಮಯ್ಯನವರ ಕಾರ್ಯ ವೈಖರಿ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಪೈಕಿ ರೋಷನ್ ಬೇಗ್ ಅವರನ್ನು ಕಾಂಗ್ರೆಸ್‍ನಿಂದ ಅಮಾನತು ಮಾಡಲಾಗಿದೆ. ಎಚ್.ಕೆ.ಪಾಟೀಲ್ ಅವರನ್ನು ದೆಹಲಿಗೆ ಕರೆಸಿಕೊಂಡು ಸಮಾಧಾನಪಡಿಸುವ ಪ್ರಯತ್ನವನ್ನು ಹೈಕಮಾಂಡ್ ನಡೆಸಿದೆ. ಆದರೆ ತಮ್ಮ ಪ್ರಯತ್ನ ಕೈ ಬಿಡದ ವಿಶ್ವನಾಥ್ ಅವರು ಇಂದು ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿದ್ದಾರೆ.

ಇದರ ಸುಳಿವು ಅರಿತ ಸಿದ್ದರಾಮಯ್ಯ ಬಣ್ಣದ ನಾಯಕರು ರೋಷನ್ ಬೇಗ್ ಅವರ ಅಮಾನತು ಆದೇಶವನ್ನು ಸಮರ್ಥಿಸಿಕೊಳ್ಳುವ ಮೂಲಕ ಸಿದ್ದು ನಾಯಕತ್ವಕ್ಕೆ ಪರೋಕ್ಷ ಬೆಂಬಲ ವ್ಯಕ್ತಪಡಿಸಲು ಆರಂಭಿಸಿದ್ದಾರೆ.

ದೆಹಲಿ ಪ್ರವಾಸ ಕೈಗೊಂಡಿದ್ದ ಸಿದ್ದರಾಮಯ್ಯನವರು, ಲೋಕಸಭೆ ಚುನಾವಣೆಯಲ್ಲಿ ಯಾವೆಲ್ಲ ಕಾಂಗ್ರೆಸ್ ನಾಯಕರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದರು. ಬಿಜೆಪಿ ಜೊತೆ ಹೇಗೆ ಕೈ ಜೋಡಿಸಿದರು ಎಂಬ ಕುರಿತು ಸಮಗ್ರ ವರದಿ ನೀಡಿದ್ದಾರೆ.

ಹೀಗಾಗಿ ರಾಜ್ಯ ರಾಜಕಾರಣದಲ್ಲಿ ಸಿದ್ದು ಮತ್ತು ಸಿದ್ದು ವಿರೋಧಿ ಬಣ ಎಂಬ ಜಿದ್ದಾಜಿದ್ದಿನ ರಾಜಕಾರಣ ತಾರಕಕ್ಕೇರಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ