
ಬೆಂಗಳೂರು, ಜೂ.19-ಅಧ್ಯಕ್ಷರು, ಕಾರ್ಯಾಧ್ಯಕ್ಷರನ್ನು ಹೊರತುಪಡಿಸಿ ಕೆಪಿಸಿಸಿಯ ಎಲ್ಲಾ ಪದಾಧಿಕಾರಿಗಳನ್ನು ಜವಾಬ್ದಾರಿಯಿಂದ ಬಿಡುಗಡೆಗೊಳಿಸಲಾಗಿದ್ದು, ಹೊಸದಾಗಿ ಪಕ್ಷವನ್ನು ಪುನಾರಚಿಸಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ.
ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರ ಆದೇಶದ ಮೇರೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಇಂದು ಮಧ್ಯಾಹ್ನ ಮಹತ್ವದ ಆದೇಶ ಹೊರಡಿಸಿದ್ದು, ಕೆಪಿಸಿಸಿ ಉಪಾಧ್ಯಕ್ಷರು, ಪ್ರಧಾನಕಾರ್ಯದರ್ಶಿ, ಕಾರ್ಯದರ್ಶಿಗಳನ್ನು ಜವಾಬ್ದಾರಿಯಿಂದ ಬಿಡುಗಡೆಗೊಳಿಸಲಾಗಿದೆ.
ಅಧ್ಯಕ್ಷರಾದ ದಿನೇಶ್‍ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತ್ರ ಹುದ್ದೆಯಲ್ಲಿ ಮುಂದುವರೆದಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿತ್ತು. ಆ ದಿನದಿಂದಲೂ ಕೆಪಿಸಿಸಿ ಸಂಘಟನೆ ಪುನಾರಚನೆ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದ್ದವು. ಇತ್ತೀಚೆಗೆ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರು ನೂತನ ಪದಾಧಿಕಾರಿಗಳ ಆಯ್ಕೆ ಸಂಬಂಧಪಟ್ಟಂತೆ ಮೂರ್ನಾಲ್ಕು ಸುತ್ತಿನ ಸಭೆಯನ್ನು ನಡೆಸಿದ್ದರು. ಇದೇ ವೇಳೆ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಬದಲಾವಣೆಗೂ ಕಾಂಗ್ರೆಸ್ ನಿರ್ಧರಿಸಿದೆ. ಬ್ಲಾಕ್ ಮಟ್ಟದಿಂದ ರಾಜ್ಯಮಟ್ಟದವರೆಗೂ ಎಲ್ಲಾ ಪದಾಧಿಕಾರಿಗಳನ್ನು ಬದಲಾವಣೆ ಮಾಡಲು ನಿರ್ಧರಿಸಲಾಗಿದೆ.
ಇನ್ನು ಮುಂದೆ ಮುಖಂಡರ ಬೆಂಬಲಿಗರು ಎಂಬ ಕಾರಣಕ್ಕೆ ಪದಾಧಿಕಾರಿಗಳನ್ನಾಗಿ ನೇಮಿಸದೆ ಪಕ್ಷ ಸಂಘಟನೆಗಾಗಿ ಸಮಯ ಮೀಸಲಿಡುವ ಮತ್ತು ಶ್ರಮ ಹಾಕುವ ಮುಖಂಡರನ್ನು ಮಾತ್ರ ಪದಾಧಿಕಾರಿ ಹುದ್ದೆಗೆ ನಿಯೋಜಿಸುವ ಚಿಂತನೆ ನಡೆದಿದೆ.