ನಾನು ಕಾಂಗ್ರೇಸ್‍ನ ಶಿಸ್ತಿನ ಸಿಪಾಯಿ-ಶಾಸಕ ರೋಷನ್ ಬೇಗ್

ಬೆಂಗಳೂರು, ಜೂ.19-ನಾನು ಅಖಿಲ ಭಾರತ ಕಾಂಗ್ರೆಸ್‍ನ ಶಿಸ್ತಿನ ಸಿಪಾಯಿ. ಸಿದ್ದು ಕಾಂಗ್ರೆಸ್‍ನ ಕಾರ್ಯಕರ್ತ ಅಲ್ಲ. ನನ್ನನ್ನು ಅಮಾನತು ಮಾಡಿರುವ ಕುರಿತು ಪಕ್ಷದ ಹಿರಿಯ ನಾಯಕರ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಶಾಸಕ ರೋಷನ್ ಬೇಗ್ ಹೇಳಿದ್ದಾರೆ.

ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ 40,900 ಮತಗಳ ಲೀಡ್ ಕೊಡಿಸಿದ್ದೇನೆ. ಅದೇ ರೀತಿ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್‍ಗುಂಡೂರಾವ್ ಕ್ಷೇತ್ರದಲ್ಲಿ 25,000, ಸಿದ್ದರಾಮಯ್ಯ ಅವರ ಬಾದಾಮಿ ಕ್ಷೇತ್ರದಲ್ಲಿ 9 ಸಾವಿರ, ಸಿದ್ದರಾಮಯ್ಯ ಹಿಂದೆ ಸ್ಪರ್ಧಿಸಿದ್ದ ವರುಣಾ ಕ್ಷೇತ್ರದಲ್ಲಿ 36 ಸಾವಿರ ಬಿಜೆಪಿಗೆ ಲೀಡ್ ಬಂದಿದೆ. ಇದಕ್ಕೆ ಕಾರಣಗಳೇನು?ಇದೆಲ್ಲ ಹೇಗಾಯಿತು? ಎಂದು ಸಮಾಲೋಚನೆ ನಡೆಸಬೇಕಿತ್ತು, ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಮಾಡಬೇಕಿತ್ತು. ಅದನ್ನೆಲ್ಲ ಬಿಟ್ಟು ಏಕಾಏಕಿ ನನ್ನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಸತ್ಯ ಹೇಳಿದ್ದೇನೆ. ಸತ್ಯ ಹೇಳುವುದೇ ಅಪರಾಧವೇ?ಪ್ರಜಾಪ್ರಭುತ್ವದಲ್ಲಿ ಚರ್ಚೆ ಇರಬೇಕು. ಲೋಕಸಭೆ ಫಲಿತಾಂಶದ ಕುರಿತು ಚುನಾವಣೋತ್ತರ ಸಮೀಕ್ಷೆಗಳನ್ನು ನೋಡಿ ಮನಸ್ಸಿಗೆ ನೋವಾಗಿ ಕಾಂಗ್ರೆಸ್‍ನ ಕಾರ್ಯಕರ್ತರ ಅಭಿಪ್ರಾಯಗಳನ್ನು ನಾನು ಹೇಳಿದ್ದೇನೆ. ಟೀಕೆ ಮಾಡಿಲ್ಲ ಎಂದು ಹೇಳುವುದಿಲ್ಲ. ನಾನು ತಪ್ಪು ಮಾಡಿದ್ದೇನೆ, ಉಪ್ಪು ತಿಂದವರು ನೀರು ಕುಡಿಯಬೇಕು ಎಂದು ಹೇಳುವುದಾದರೆ ಕಾಂಗ್ರೆಸ್‍ನ ನಾಯಕರ ವಿರುದ್ಧ ಹೇಳಿಕೆ ನೀಡಿದ ಶಾಸಕ ರಮೇಶ್ ಜಾರಕಿ ಹೊಳಿ, ಮಧುಗಿರಿಯ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಕೋಲಾರದಲ್ಲಿ ದಲಿತ ನಾಯಕ ಮುನಿಯಪ್ಪ ಸೋಲಿಸಬೇಕು ಎಂದು ಬಹಿರಂಗ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕರ ವಿರುದ್ಧ ಮತ್ತು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಜೊತೆ ಸಭೆಯಲ್ಲಿ ಭಾಗವಹಿಸಿದ್ದು, ಅವರ ಪರ ಪ್ರಚಾರ ಮಾಡಿದ್ದ ಕಾಂಗ್ರೆಸ್ ನಾಯಕರುಗಳು ಉಪ್ಪು ತಿಂದಿಲ್ಲವೇ, ಅವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ರೋಷನ್‍ಬೇಗ್ ಪ್ರಶ್ನಿಸಿದರು.

ಕಾಂಗ್ರೆಸ್ ಸೋಲಿನ ನೈತಿಕ ಹೊಣೆ ಹೊತ್ತು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈವರೆಗೂ ಅದನ್ನು ಅವರು ಹಿಂಪಡೆದಿಲ್ಲ. ಇಲ್ಲಿ ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಮಾತ್ರ ಗೆದ್ದಿದೆ.ಇದರಿಂದ ನೋವಾಗುವುದಿಲ್ಲವೇ?ಅದನ್ನು ಹೇಳುವುದು ತಪ್ಪೇ? ನಾನು ಮಾತನಾಡಿದ ನಂತರ ಚರ್ಚೆ ಮಾಡಬೇಕಿತ್ತು, ಕಾಂಗ್ರೆಸ್ ಸಂಘಟನೆ ಎಂದರೆ ಗುಸುಗುಸು ಮಾತನಾಡಿಕೊಳ್ಳುವುದಲ್ಲ, ಪಾರದರ್ಶಕವಾಗಿರಬೇಕು, ಚರ್ಚೆ ಮಾಡಬೇಕು ಎಂದು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಮುದ್ದಹನುಮೇಗೌಡ ಅವರನ್ನು ಬಲಿಪಶು ಮಾಡಲಾಯಿತು, ಮೈತ್ರಿ ಮಾಡಿಕೊಂಡು ದೇವೇಗೌಡರನ್ನು ಸೋಲಿಸಲಾಯಿತು. ಮುನಿಯಪ್ಪ ಅವರ ವಿರುದ್ಧವೂ ಷಡ್ಯಂತ್ರ ನಡೆದಿತ್ತು.ನಾನು ಇದನ್ನೆಲ್ಲ ಮಾತನಾಡುವುದು ತಪ್ಪೇ? ನಾನು ಕಾಂಗ್ರೆಸ್‍ನ ಶಿಸ್ತಿನ ಸಿಪಾಯಿ, ಸಿದ್ದು ಕಾಂಗ್ರೆಸ್‍ನ ಕಾರ್ಯಕರ್ತನಲ್ಲ. ನನ್ನನ್ನು ಅಮಾನತು ಮಾಡಿರುವ ಬಗ್ಗೆ ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್, ಮಲ್ಲಿಕಾರ್ಜುನ್ ಖರ್ಗೆ, ಕೆ.ಎಚ್.ಮುನಿಯಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ. ಆನಂತರ ನಾನು ದೆಹಲಿ ನಾಯಕರೊಂದಿಗೆ ಮಾತನಾಡಬೇಕೇ ಅಥವಾ ದೆಹಲಿಗೆ ಹೋಗಬೇಕೇ ಎಂಬ ಬಗ್ಗೆ ನಿರ್ಧಾರ ಮಾಡುತ್ತೇನೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ