
ಬೆಂಗಳೂರು, ಜೂ.19-ಕಾಂಗ್ರೆಸ್ನಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನಗೊಂಡಿರುವ ಲಿಂಗಾಯತ ಸಮುದಾಯದ ನಾಯಕರು ಇಂದು ಸಂಜೆ ಖಾಸಗಿ ಹೊಟೇಲ್ನಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ.
ಇತ್ತೀಚೆಗೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲು ಲಿಂಗಾಯತ ವೀರಶೈವ ಸಮುದಾಯದ ವಿರೋಧವೇ ಕಾರಣ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ.
ಕಾಂಗ್ರೆಸ್ ಸಚಿವ ಸ್ಥಾನದಲ್ಲಾಗಲಿ, ಪಕ್ಷ ಸಂಘಟನೆಯ ಪದಾಧಿಕಾರಿ ಹುದ್ದೆಗಳಲ್ಲಾಗಲಿ ಲಿಂಗಾಯತ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ ಎಂಬ ಆರೋಪಗಳಿವೆ.
ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಇತ್ತೀಚೆಗೆ ಶಾಸಕ ಬಿ.ಸಿ.ಪಾಟೀಲ್ ಅವರು ಲಿಂಗಾಯತ ನಾಯಕರನ್ನು ಕಾಂಗ್ರೆಸ್ ಕಡೆಗಣಿಸುತ್ತಿದೆ ಎಂದು ಬಹಿರಂಗ ಹೇಳಿಕೆ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಲಿಂಗಾಯತ ನಾಯಕರುಗಳು ಒಳಗೊಳಗೇ ಕಾಂಗ್ರೆಸ್ ವಿರುದ್ಧ ಕೆಂಡಕಾರುತ್ತಿದ್ದಾರೆ. ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಪಕ್ಷದ ನಾಯಕತ್ವ ವಿಫಲವಾಗಿದೆ. ಅಹಿಂದ ವರ್ಗಕ್ಕಷ್ಟೇ ಹೆಚ್ಚಿನ ಮಣೆ ಹಾಕಲಾಗುತ್ತಿದೆ ಎಂಬ ಅಸಮಾಧಾನಗಳು ವ್ಯಾಪಕವಾಗಿವೆ. ಹೀಗಾಗಿ ಅಸಮಾಧಾನಗೊಂಡಿರುವ ನಾಯಕರನ್ನು ಸಮಾಧಾನಪಡಿಸುವುದು, ಕಾಂಗ್ರೆಸ್ ಬಗ್ಗೆ ಲಿಂಗಾಯತ ಸಮುದಾಯದಲ್ಲಿರುವ ಅಭಿಪ್ರಾಯವನ್ನು ಬದಲಿಸುವ ಸಲುವಾಗಿ ಇಂದು ಸಂಜೆ ಮಹತ್ವದ ಸಭೆ ಕರೆಯಲಾಗಿದೆ.
ಖಾಸಗಿ ಹೊಟೇಲ್ನಲ್ಲಿ ಸಂಜೆ 7 ಗಂಟೆಗೆ ನಡೆಯಲಿರುವ ಸಭೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಸಚಿವರು, ಶಾಸಕರು, ಹಿರಿಯ ಮುಖಂಡರು ಮತ್ತು ಕೆಪಿಸಿಸಿ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.